ಬೆಂಗಳೂರು ನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ಎಂಜಿ ರಸ್ತೆ (ಮಹಾತ್ಮ ಗಾಂಧಿ ರಸ್ತೆ)ಯೂ ಒಂದು. ನಗರದ ಹಲವು ರಸ್ತೆಗಳಲ್ಲಿ ಜಲಮಂಡಳಿ ಕಾಮಗಾರಿಗಳು ನಡೆಯುತ್ತಿವೆ. ಈಗ ಎಂಜಿ ರಸ್ತೆಯಲ್ಲಿಯೂ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ. 40 ವರ್ಷಗಳಲ್ಲಿ ಮೊದಲ ಬಾರಿಗೆ ಈ ರಸ್ತೆಯನ್ನು ಅಗೆಯಲಾಗುತ್ತದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿ ರಸ್ತೆಯ ಒಂದು ಭಾಗದಲ್ಲಿ 10 ಅಡಿ ರಸ್ತೆಯನ್ನು ಕಾಮಗಾರಿಗಾಗಿ ಅಗೆಯಲಿದೆ. ಇದಕ್ಕಾಗಿ ವಿವರವಾದ ಯೋಜನಾ ವರದಿ ಸಿದ್ಧವಾಗಿದೆ. ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.
40 ವರ್ಷಗಳಲ್ಲಿಯೇ ಮೊದಲ ಬಾರಿಗೆ ಹೊಸ ನೀರು ಮತ್ತು ಒಳಚರಂಡಿ ಸಂಪರ್ಕದ ಪೈಪ್ ಲೈನ್ ಅಳವಡಿಕೆ ಮಾಡಲು ರಸ್ತೆಯನ್ನು ಅಗೆಯಲಾಗುತ್ತದೆ. ಈಗಿರುವ ಸಂಪರ್ಕದ ಪೈಪ್‌ಗಳು ಹಾನಿಯಾಗಿವೆ. ನೀರು ಸೋರಿಕೆಯಾಗುತ್ತಿದೆ. ಆದ್ದರಿಂದ ಹೊಸ ಮಾರ್ಗ ಅವಳಡಿಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಮಗಾರಿಗಳ ವಿವರ: ಸದ್ಯದ ಮಾಹಿತಿ ಪ್ರಕಾರ 2026ರ ಗಣರಾಜ್ಯೋತ್ಸವದ ಬಳಿಕ ಕಾಮಗಾರಿ ಆರಂಭವಾಗಲಿದ್ದು, ಕಾಮಗಾರಿ ಪೂರ್ಣಗೊಳ್ಳಲು ಕೆಲವು ತಿಂಗಳುಗಳು ಬೇಕಾಗುತ್ತದೆ. ಬ್ರಿಗೇಡ್ ರಸ್ತೆಯಿಂದ ಟ್ರಿನಿಟಿ ವೃತ್ತದ ತನಕ ಎರಡೂ ಬದಿಯಲ್ಲಿ ಪೈಪ್‌ಗಳನ್ನು ಬದಲಾವಣೆ ಮಾಡಲಾಗುತ್ತದೆ.
ಅನಿಕ್ ಕುಂಬ್ಳೆ ವೃತ್ತದಲ್ಲಿ ಒಂದು ಬದಿಯಲ್ಲಿ ಮಾತ್ರ ವಾಣಿಜ್ಯ ಸಂಕೀರ್ಣಗಳು ಇವೆ. ಇನ್ನೊಂದು ಬದಿಯಲ್ಲಿ ಯಾವುದೇ ಕಟ್ಟಡಗಳು ಇಲ್ಲದ ಕಾರಣ ಒಂದು ಬದಿಯಲ್ಲಿ ಕಾಮಗಾರಿ ನಡೆಸಲಾಗುತ್ತದೆ. ರಸ್ತೆಯ ಒಂದು ಬದಿಯಲ್ಲಿ 10 ಅಡಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಒಟ್ಟಿಗೆ ನೀರು ಮತ್ತು ಒಳಚರಂಡಿ ಸಂಪರ್ಕದ ಹೊಸ ಪೈಪ್ ಹಾಕಲಾಗುತ್ತದೆ.
ಬೆಂಗಳೂರು ಕೇಂದ್ರ ನಗರಸಭೆಯ ವ್ಯಾಪ್ತಿಯ ಒಟ್ಟು 2.2 ಕಿ.ಮೀ.ಉದ್ದದ ಎಂಜಿ ರಸ್ತೆಯಲ್ಲಿ 45 ಕೋಟಿ ರೂ.ಗಳ ವೆಚ್ಚದಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಾಗುತ್ತದೆ. ಇದಕ್ಕೆ ಪೂರಕವಾಗಿ ಮೊದಲ ಹಂತದಲ್ಲಿ ನೀರು, ಒಳಚರಂಡಿ ಪೈಪ್‌ಗಳನ್ನು ಹೊಸದಾಗಿ ಅಳವಡಿಕೆ ಮಾಡಲಾಗುತ್ತದೆ.
ಈ ವರ್ಷದ ಜೂನ್‌ನಲ್ಲಿ ಎಂಜಿ ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳಲು ಒಪ್ಪಿಗೆ ನೀಡಲಾಗಿತ್ತು. ಆದರೆ ವೈಟ್‌ಟಾಪಿಂಗ್ ಕಾಮಗಾರಿಗೆ ಬಹಳ ದಿನಗಳು ಬೇಕಾಗುತ್ತದೆ. ಆದ್ದರಿಂದ ಸ್ಥಳೀಯ ಶಾಸಕ ಎನ್.ಎ.ಹ್ಯಾರೀಸ್ ಈ ಕಾಮಗಾರಿಗಳ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಸಮಾಧಾನ ಹೊಂದಿಲ್ಲ.
ಜಲಮಂಡಳಿ ಅಧಿಕಾರಿಗಳಿಗೆ ನೀರು, ಒಳಚರಂಡಿ ಪೈಪ್‌ಗಳನ್ನು ಅಳವಡಿಕೆ ಮಾಡಲು ಸೂಚಿಸಲಾಗಿದೆ. ಆದರೆ ಹೊಸ ವರ್ಷಾಚರಣೆ ಮುಗಿಯುವ ತನಕ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು ಸೂಚಿಸಿದ್ದೇನೆ ಎಂದು ಶಾಸಕರು ಹೇಳಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕುರಿತು ಚರ್ಚೆಗಳು ನಡೆದಿವೆ. ಆದರೆ ಈ ಪ್ರಸ್ತಾವಿತ ಕಾಮಗಾರಿ ಯಾವಾಗ ಆರಂಭ? ಎಂಬ ಕುರಿತು ಇನ್ನೂ ಸಹ ತೀರ್ಮಾನವಾಗಿಲ್ಲ.
ಬೆಂಗಳೂರು ಜಲಮಂಡಳಿ ಹಿರಿಯ ಅಧಿಕಾರಿಗಳ ಪ್ರಕಾರ 40 ವರ್ಷಗಳ ಹಿಂದೆ ಎಂಜಿ ರಸ್ತೆಯಲ್ಲಿ ನೀರು, ಒಳಚರಂಡಿ ಪೈಪ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಆದರೆ ಈ ಪೈಪ್‌ಗಳಿಗೆ ಹಾನಿಯಾಗಿದ್ದು, ಹಲವಾರು ದೂರುಗಳು ಬರುತ್ತಿವೆ. ಒಮ್ಮೆ ಹೊಸ ಪೈಪ್ ಹಾಕಿದರೆ ಮುಂದಿನ 40 ವರ್ಷ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಎಂಜಿ ರಸ್ತೆಯಲ್ಲಿ ಹೊಸ ಪೈಪ್ ಅಳವಡಿಕೆ ಮಾಡುವ ಜೊತೆಗೆ ಪೊಲೀಸ್ ಮತ್ತು ಸೇನೆಯ ಕಟ್ಟಡಗಳಿಗೆ ಸಹ ಹೊಸ ಲೈನ್ ಅಳವಡಿಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


