ಸದ್ಯ ಹಿಂದಿಯ ಕೋಟ್ಯಧಿಪತಿ ಕೌನ್ ಬನೇಗಾ ಕ್ರೋರ್‌ಪತಿ ಕಾರ್ಯಕ್ರಮ ಜರುಗುತ್ತಿದ್ದು, ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.
ಪ್ರತಿ ಬಾರಿಯಂತೆ ಈ ಬಾರಿಯೂ ಮಕ್ಕಳ ರೌಂಡ್ ಅನ್ನೂ ಸಹ ಆಯೋಜಿಸಲಾಗಿದ್ದು, ಗುಜರಾತ್‌ನ ಗಾಂಧಿನಗರದ ಐದನೇ ತರಗತಿ ವಿದ್ಯಾರ್ಥಿ ಇಶಿತ್ ಭಟ್ ಎಂಬ ಬಾಲಕ ಹಾಟ್‌ಸೀಟ್‌ಗೆ ಆಯ್ಕೆಯಾಗಿದ್ದಾನೆ. ಹೀಗೆ ಆಯ್ಕೆಯಾದ ಈ ಬಾಲಕ ಅಮಿತಾಬ್ ಬಚ್ಚನ್ ನಿಯಮಗಳನ್ನು ಹೇಳಲು ಆರಂಭಿಸಿದ ಕೂಡಲೇ ತನ್ನ ಉದ್ಧಟತನ ಮೆರದಿದ್ದಾನೆ.
ನನಗೆ ರೂಲ್ಸ್ ತಿಳಿದಿದೆ, ನನಗೆ ಅದನ್ನು ಅರ್ಥ ಮಾಡಿಸುವುದು ಬೇಡ ಎಂದಿದ್ದಾನೆ. ಅಲ್ಲದೇ ಅಮಿತಾಬ್ ಅವರಿಗೆ ಕಿಂಚಿತ್ತೂ ಗೌರವ ನೀಡದೇ ಏಕವಚನದಲ್ಲೇ ಮಾತನಾಡಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಹೀಗೆ ಆರಂಭದಲ್ಲೇ ತನ್ನ ದಡ್ಡತನ ಪ್ರದರ್ಶಿಸಿದ ಈತ ಆಟವನ್ನೇಗೆ ಆಡುತ್ತಾನೆ ಎಂದು ಎಲ್ಲರೂ ಕಾಯುತ್ತಿದ್ದರು. ಮೊದಲ ಪ್ರಶ್ನೆ ಬೆಳಗ್ಗೆ ಸೇವಿಸುವ ಆಹಾರಕ್ಕೆ ಏನನ್ನುತ್ತಾರೆ ಎಂಬ ಪ್ರಶ್ನೆ ಕೇಳಿಬರುತ್ತಿದ್ದಂತೆ ಕೈ ಎತ್ತಿ ಆಪ್ಷನ್ ಬೇಡ ಬ್ರೇಕ್‌ಫಾಸ್ಟ್ ಲಾಕ್ ಮಾಡು ಎಂದು ಏಕವಚನದಲ್ಲೇ ಉತ್ತರಿಸಿದ ಇಶಿತ್ ಭಟ್ ಮತ್ತೊಮ್ಮೆ ವಿವೇಕವಿಲ್ಲದೇ ವರ್ತಿಸಿದ.
ನಂತರ ಎರಡನೇ ಪ್ರಶ್ನೆಯಾದ ಟ್ಯಾಂಗೊ, ಕಥಕ್ ಹಾಗೂ ಬ್ರೇಕ್ ಇವು ಯಾವುದರ ಪದಗಳು ಎಂಬ ಸುಲಭ ಪ್ರಶ್ನೆಗೂ ಆಪ್ಷನ್ ಬೇಡವೇ ಬೇಡ ಡಾನ್ಸ್ ಎಂದು ಉತ್ತರಿಸಿದ ಇಶಿತ್ ಭಟ್ ಚೆಸ್‌ಬೋರ್ಡ್‌ನಲ್ಲಿ ಎಷ್ಟು ರಾಜ ಇರಲಿವೆ ಎಂಬ ಮೂರನೇ ಸುಲಭ ಪ್ರಶ್ನೆಗೂ ಆಪ್ಷನ್ ಬೇಡ 2 ಎಂದು ಕಿರುಚುತ್ತಾ ಹೇಳಿದ್ದಾನೆ.
ಹೀಗೆ ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸಿದ ಈತನಿಗೆ ಐದನೇ ಪ್ರಶ್ನೆ ಕೇಳುವ ಮುನ್ನ ಅಮಿತಾಬ್ ಬಚ್ಚನ್ ವೀಕ್ಷಕರಿಗೆ ಐದನೇ ಪ್ರಶ್ನೆಗೂ ಮುನ್ನ ನೀಡಬೇಕಾದ ನಿರೂಪಣೆಯನ್ನು ನೀಡುತ್ತಾ ಇರುವಾಗ ಮತ್ತೊಮ್ಮೆ ನಾಲಿಗೆ ಹರಿಬಿಟ್ಟ ಇಶಿತ್ ಭಟ್ ಸರ್ ಮಾತು ಸಾಕು ಪ್ರಶ್ನೆಯನ್ನು ಕೇಳು ಎಂದು ಹೇಳಿದ್ದಾನೆ.
ಹೀಗೆ ಹೇಳುತ್ತಿದ್ದಂತೆ ಐದನೇ ಪ್ರಶ್ನೆ ʼವಾಲ್ಮೀಕಿ ರಾಮಾಯಣದ ಮೊದಲ ಖಂಡ ಯಾವುದು?ʼ ಎಂಬ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆ ಎದುರಾಗುತ್ತಿದ್ದಂತೆ ಈ ಹಿಂದೆ ಇದ್ದ ಕೊಬ್ಬೆಲ್ಲ ಇಳಿದು ಆಪ್ಷನ್ಸ್ ಕೊಡಿ ಎಂದು ಕೇಳಿದ್ದಾನೆ. ಈತ ಆಯ್ಕೆಗಳನ್ನು ಕೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿದ್ದ ಮಂದಿ ನಗಲಾರಂಭಿಸಿದ್ದಾರೆ.
ಆಯ್ಕೆಗಳು ಬಂದ ಬಳಿಕ ಅಯೋಧ್ಯ ಖಂಡ ಎಂಬ ಆಯ್ಕೆಯನ್ನು ಆರಿಸಿದ ಈತ ಅಮಿತಾಬ್ ಬಚ್ಚನ್ ಪಕ್ಕಾ ಅದನ್ನೇ ಲಾಕ್ ಮಾಡುವುದಾ ಎಂದು ಮರು ಪ್ರಶ್ನೆ ಕೇಳಿದಾಗಲೂ ಅರೇ ಲಾಕ್ ಮಾಡು ಎಂದು ಹೇಳುವ ಮೂಲಕ ಮತ್ತೊಮ್ಮೆ ತನ್ನ ಅವಿವೇಕತನ ಮೆರೆದಿದ್ದಾನೆ. ಆದರೆ ಈ ಉತ್ತರ ತಪ್ಪಾಗಿದ್ದು, ಬಾಲ ಖಂಡ ಸರಿಯಾದ ಉತ್ತರವಾಗಿತ್ತು.
ಹೀಗೆ ಅತಿಯಾದ ವಿಶ್ವಾಸದಿಂದ ಇದ್ದ ಇತಿಶ್ ಭಟ್ ಕೊಬ್ಬನ್ನು ರಾಮಾಯಣದ ಪ್ರಶ್ನೆ ನೆಲ ಕಚ್ಚಿಸಿತು. ಮೊದಲ 4 ಪ್ರಶ್ನೆಗಳಿಗೆ ಉತ್ತರಿಸುವಾಗ ಅಮಿತಾಬ್ ರೀತಿಯ ಹಿರಿಯರಿಗೆ ಗೌರವವನ್ನೂ ನೀಡದೇ ಉದ್ಧಟತನ ಮೆರೆದಿದ್ದ ಈತ ಐದನೇ ಪ್ರಶ್ನೆಗೆ ಮಕಾಡೆ ಮಲಗಿ ಒಂದು ರೂಪಾಯಿಯನ್ನೂ ಗೆಲ್ಲದೇ ಸೋತು ಬರಿಗೈನಲ್ಲಿ ಹೊರಬಿದ್ದಿದ್ದಾನೆ.
ಇನ್ನು ಈತನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಆತನ ತಂದೆ ಹಾಗೂ ತಾಯಿಗೆ ಗೊತ್ತಿಲ್ಲ ಎಂದು ಕಾಣುತ್ತದೆ ಎಂದು ಕೆಟ್ಟ ಪೋಷಣೆ ಎಂದು ಜರಿದಿದ್ದಾರೆ. ಒಟ್ಟಿನಲ್ಲಿ ಅತಿಯಾಗಿ ವರ್ತಿಸಿದ ಬಾಲಕ ಇತಿಶ್ ಭಟ್ ಕೆಲವೇ ನಿಮಿಷಗಳಲ್ಲಿ ಮುಖಭಂಗ ಅನುಭವಿಸಿದ್ದಾನೆ.
ದಕ್ಷಿಣ ಭಾರತದ ಜನಪ್ರಿಯ ತಿಂಡಿ ‘ಇಡ್ಲಿ’ಗೆ ಗೂಗಲ್‌ನಿಂದ ಸ್ಪೆಷಲ್ ಡೂಡಲ್ ಗೌರವ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


