ದೆಹಲಿಯ ಕೆಂಪುಕೋಟೆ ಬಳಿ ಕಳೆದ ವಾರ ನಡೆದ ಐ-20 ಕಾರು ಸ್ಪೋಟ ಪ್ರಕರಣದ ತನಿಖೆಯನ್ನು ಎನ್ಐಎ ಚುರುಕುಗೊಳಿಸಿದೆ. ಈ ಆತ್ಮಾಹುತಿ ದಾಳಿ ಪ್ರಕರಣದಲ್ಲಿ 10 ಜನರು ಸಾವನ್ನಪ್ಪಿದ್ದು, 32 ಜನರು ಗಾಯಗೊಂಡಿದ್ದರು.
ಕೇಂದ್ರ ಸರ್ಕಾರ ಸ್ಪೋಟ ಪ್ರಕರಣದ ತನಿಖೆಯನ್ನು ಎನ್‌ಐಗೆ ಹಸ್ತಾಂತರ ಮಾಡಿತ್ತು. ಈಗ ಸ್ಪೋಟದಲ್ಲಿ ಸಾವನ್ನಪ್ಪಿದ ಆತ್ಮಾಹುತಿ ದಾಳಿಕೋರನ ಆಪ್ತನನ್ನು ಎನ್ಐಎ ಬಂಧಿಸಿದೆ. ಸ್ಪೋಟಕ್ಕೂ ಮೊದಲು ಆರೋಪಿಗೆ 20 ಲಕ್ಷ ರೂ. ಹಣವನ್ನು ನೀಡಲಾಗಿತ್ತು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ಜಮ್ಮು ಮತ್ತು ಕಾಶ್ಮೀರ ಮೂಲದವನಾಗಿದ್ದು, ಆತ್ಮಾಹುತಿ ಬಾಂಬ್ ದಾಳಿಕೋರನ ಜೊತೆ ಸೇರಿ ದೆಹಲಿ ಸ್ಪೋಟದ ಸಂಚು ರೂಪಿಸಿದ್ದ, ದೆಹಲಿಗೂ ಆಗಮಿಸಿ ದಾಳಿಕೋರನಿಗೆ ಕಾರು ಖರೀದಿಯಲ್ಲಿ ಸಹಾಯ ಮಾಡಿದ್ದ ಎಂದು ಎನ್‌ಐಎ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ದೆಹಲಿಯಲ್ಲೇ ಬಂಧಿಸಿದ ಎನ್‌ಐಎ: ಬಂಧಿತ ಆರೋಪಿಯನ್ನು ಅಮಿರ್ ರಶೀದ್ ಅಲಿ ಎಂದು ಗುರುತಿಸಲಾಗಿದೆ. ಈತನನ್ನು ದೆಹಲಿಯಲ್ಲಿಯೇ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಈತ ಆತ್ಮಾಹುತಿ ಬಾಂಬ್ ದಾಳಿಕೋರನ ಜೊತೆಗೆ ದೆಹಲಿಗೆ ಆಗಮಿಸಿದ್ದನೇ? ಎಂದು ತನಿಖೆ ನಡೆಯುತ್ತಿದೆ.
ನವೆಂಬರ್ 10ರಂದು ನಡೆದ ದಾಳಿಗೆ ಬಳಸಲಾದ ಹ್ಯುಂಡೈ ಐ-20 ಕಾರು ಖರೀದಿಯಲ್ಲಿ ಬಂಧಿತ ಆರೋಪಿ ಅಮಿರ್ ರಶೀದ್ ಅಲಿ ಪ್ರಮುಖ ಪಾತ್ರವಹಿಸಿದ್ದಾನೆ. ಆರೋಪಿ ಕಾಶ್ಮೀರದ ಪಾಂಪೋರೆಯ ಸಂಬೂರ ಎಂಬ ಗ್ರಾಮದ ನಿವಾಸಿ. ದಾಳಿಕೋರನಿಗೂ ಈತನಿಗೂ ಹಲವು ವರ್ಷಗಳಿಂದ ಪರಿಚಯವಿತ್ತು.
ಈ ಕೃತ್ಯಕ್ಕೆ ಅಮಿರ್ ಡಾ.ಉಮರ್ ಉನ್ ನಬಿ ಜೊತೆ ಸೇರಿ ಸಂಚು ರೂಪಿಸಿದ್ದ. ದೆಹಲಿಗೆ ಆಗಮಿಸಿದ್ದ ಅಮಿರ್ ಕಾರನ್ನು ಖರೀದಿಸಿ ಕೊಟ್ಟಿದ್ದ. ಎನ್ಐಎ ಈಗಾಗಲೇ ಕಾರು ಸ್ಪೋಟದಲ್ಲಿ ಮೃತಪಟ್ಟಿರುವುದು ಪುಲ್ವಾಮಾ ಜಿಲ್ಲೆಯ ಡಾ.ಉಮರ್ ಉನ್ ನಬಿ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಖಚಿತಪಡಿಸಿಕೊಂಡಿದೆ.
ಡಾ.ಉಮರ್ ಉನ್ ನಬಿ ಹರಿಯಾಣದ ಅಲ್ ಫಲಾಹ್ ವಿಶ್ವವಿದ್ಯಾಲಯದ ಸಾಮಾನ್ಯ ಔಷಧಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದ. ನಬಿಗೆ ಸೇರಿದ ಮತ್ತೊಂದು ಕಾರನ್ನು ಸಹ ಎನ್‌ಐಎ ವಶಕ್ಕೆ ಪಡೆದುಕೊಂಡಿದೆ. ಸ್ಪೋಟಕ್ಕೆ ಐ-20 ಕಾರು ಬಳಕೆ ಮಾಡಲಾಗಿತ್ತು. ಆದರೆ ಒಟ್ಟು ಎರಡು ಕಾರುಗಳನ್ನು ಆರೋಪಿಗಳು ಖರೀದಿ ಮಾಡಿದ್ದರು.
ದೆಹಲಿ ಪೊಲೀಸರಿಂದ ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಪೋಟ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಎನ್‌ಐಎ 73 ಜನರ ವಿಚಾರಣೆಯನ್ನು ನಡೆಸಿದೆ. ಇವರಲ್ಲಿ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡ ಜನರು ಸಹ ಸೇರಿದ್ದಾರೆ.
ಈ ಪ್ರಕರಣದ ತನಿಖೆಯಲ್ಲಿ ಎನ್‌ಐಎ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹರ್ಯಾಣ ಮತ್ತು ಉತ್ತರ ಪ್ರದೇಶದ ಪೊಲೀಸರು ಹಾಗೂ ವಿವಿಧ ರಾಜ್ಯಗಳ ತನಿಖಾ ಸಂಸ್ಥೆಗಳ ಜೊತೆ ಸಮನ್ವಯದಿಂದ ಕೆಲಸ ಮಾಡುತ್ತಿದೆ. ಹಲವಾರು ಕಡೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹ ಮಾಡಿಕೊಂಡು ತನಿಖೆಯನ್ನು ನಡೆಸಲಾಗುತ್ತಿದೆ.
ಈ ದಾಳಿ ಪ್ರಕರಣದ ಹಿಂದೆ ದೊಡ್ಡ ಮಟ್ಟದ ಸಂಚು ಇದ್ದು, ಈ ಕುರಿತು ಮಾಹಿತಿಯನ್ನು ಎನ್ಐಎ ಸಂಗ್ರಹ ಮಾಡುತ್ತಿದೆ. ಸ್ಫೋಟ ಪ್ರಕರಣದ ಕುರಿತು ಎನ್ಐಎ RC/21/2025/NIA/DLI ಎಂಬ ಹೆಸರಿನಲ್ಲಿ ಎಫ್ಐಆರ್ ದಾಖಲು ಮಾಡಿಕೊಂಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


