ನಿನ್ನೆ ( ಡಿಸೆಂಬರ್ 16 ) ಅಬುದಾಬಿಯ ಇತಿಹಾದ್ ಅರೆನಾ ಹೊಟೇಲ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಿನಿ ಹರಾಜು ಪ್ರಕ್ರಿಯೆ ನಡೆಯಿತು. ಎಲ್ಲ ತಂಡಗಳು ರಿಟೆನ್ಷನ್‌ನಿಂದ ತೆರವಾಗಿದ್ದ ಸ್ಥಾನಗಳಿಗೆ ಹೊಸ ಆಟಗಾರರನ್ನು ಆರಿಸಿಕೊಂಡವು.
ಇನ್ನು ನಿನ್ನೆ ನಡೆದ ಮಿನಿ ಹರಾಜು ಎಲ್ಲ ತಂಡಗಳ ಪಾಲಿಗೆ ಮಿನಿ ಹರಾಜು ಎನಿಸಿಕೊಂಡರೆ, ರಿಟೆನ್ಷನ್ ವೇಳೆ ಹೆಚ್ಚು ಆಟಗಾರರನ್ನು ತಂಡದಿಂದ ಹೊರಹಾಕಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಪಾಲಿಗೆ ಇದು ಮೆಗಾ ಹರಾಜೇ ಆಗಿತ್ತು.
ಕೋಟಿ ಕೋಟಿ ಹಣದೊಂದಿಗೆ ಮಿನಿ ಹರಾಜಿಗೆ ಪ್ರವೇಶಿಸಿದ್ದ ಈ ಎರಡು ತಂಡಗಳು ಸ್ಟಾರ್ ಆಟಗಾರರ ಹೆಸರು ಘೋಷಣೆಯಾದಾಗಲೆಲ್ಲ ಹಣದ ಹೊಳೆಯನ್ನೇ ಹರಿಸಿದವು. ಅದರಲ್ಲೂ ವಿದೇಶಿ ಆಟಗಾರ ಕೆಮರೂನ್ ಗ್ರೀನ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಪೈಪೋಟಿಗೆ ಬಿದ್ದವರ ಹಾಗೆ ಬಿಡ್ ಮಾಡಿದರು.
ಅಂತಿಮವಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ 25.2 ಕೋಟಿಗೆ ಕೆಮರೂನ್ ಗ್ರೀನ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು. ಇನ್ನು ಹರಾಜಿನಲ್ಲಿ ಎರಡನೇ ಅತಿದೊಡ್ಡ ಮೊತ್ತವನ್ನೂ ಸಹ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವೇ ವ್ಯಯಿಸಿತು. ಮತೀಶಾ ಪತಿರಾಣಾಗೆ ಬರೋಬ್ಬರಿ 18 ಕೋಟಿ ನೀಡಿ ತನ್ನ ತೆಕ್ಕೆಗೆ ಹಾಕಿಕೊಂಡಿತು.
ಹೀಗೆ ನಿನ್ನೆಯ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಕರಿಯಾದ ಕೆಮರೂನ್ ಗ್ರೀನ್ 25.2 ಕೋಟಿಯ ಬದಲಾಗಿ ಎರಡನೆ ಅತಿ ದುಬಾರಿಯ ಆಟಗಾರ ಎನಿಸಿಕೊಂಡ ಪತಿರಾಣಾರಷ್ಟೆ 18 ಕೋಟಿಯನ್ನು ಪಡೆಯಲಿದ್ದಾರೆ. ಹೌದು, ಗ್ರೀನ್ ಅಷ್ಟು ಮೊತ್ತಕ್ಕೆ ಮಾರಾಟವಾಗಿದ್ದರೂ ಸಹ ಐಪಿಎಲ್ ನಿಯಮದ ಪ್ರಕಾರ ವಿದೇಶಿ ಆಟಗಾರರಿಗೆ ಗರಿಷ್ಟ 18 ಕೋಟಿ ಹಣವನ್ನು ಮಿನಿ ಹರಾಜಿನಲ್ಲಿ ಕ್ಯಾಪ್ ಮಾಡಲಾಗಿದೆ. ರಿಟೆನ್ಷನ್ ನಿಯಮದಲ್ಲೂ ಸಹ ಇದನ್ನು ಅನುಸರಿಸಲಾಗಿತ್ತು.
ಹೀಗಾಗಿ ವಿದೇಶಿ ಆಟಗಾರರು ಎಷ್ಟೇ ಮೊತ್ತಕ್ಕೆ ಮಾರಾಟವಾದರೂ ಅವರಿಗೆ ಸಿಗುವ ಗರಿಷ್ಟ ಮೊತ್ತ 18 ಕೋಟಿಯಾಗಿದ್ದು, ಉಳಿದ ಹಣ ಆಟಗಾರರ ಕ್ಷೇಮಾಭಿವೃದ್ಧಿ ನಿಧಿಗೆ ಹೋಗಲಿದೆ. ಈ ಮೂಲಕ ಗ್ರೀನ್ ಕೇವಲ 18 ಕೋಟಿ ಪಡೆಯಲಿದ್ದು, ಉಳಿದ 7.2 ಕೋಟಿ ಆಟಗಾರರ ಕ್ಷೇಮಾಭಿವೃದ್ಧಿ ನಿಧಿಗೆ ಹೋಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


