ವಿರೋಧ ಪಕ್ಷಗಳ ಭಾರೀ ವಿರೋಧದ ನಡುವೆಯೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಹೆಸರು ಬದಲಾವಣೆ ಮಾಡುವ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ.
ಕೇಂದ್ರ ಸರ್ಕಾರ ಮನರೇಗಾ ಯೋಜನೆಯ ಹೆಸರನ್ನು ವಿಬಿ ರಾಮ್-ಜಿ ಯೋಜನೆ ಎಂದು ಬದಲಾಯಿಸಲು ಲೋಕಸಭೆಯಲ್ಲಿ ಮಸೂದೆ ಮಂಡಿಸಿತ್ತು. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಹೆಸರು ಬದಲಾವಣೆ ಮಾಡಲು ವಿರೋಧ ವ್ಯಕ್ತಪಡಿಸಿದ್ದವು.
ಗುರುವಾರ ವಿರೋಧದ ನಡುವೆಯೂ ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ತಿದ್ದುಪಡಿ ಮಸೂದೆ 2025 ಲೋಕಸಭೆಯಲ್ಲಿ ಅನುಮೋದನೆಗೊಂಡಿದೆ. ಲೋಕಸಭೆಯಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿರುವ ಎನ್‌ಡಿಎ ಸರ್ಕಾರ ಯಾವ ಮಸೂದೆಯನ್ನು ಬೇಕಾದರೂ ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಬಹುದು.
ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ ಅನುಮೋದನೆ ಬಳಿಕ ಮನರೇಗಾ ಯೋಜನೆಯು ವಿಬಿ-ಜಿ ರಾಮ್‌ಜಿ ಎಂದು ಆಗಲಿದೆ. ಯೋಜನೆ ಹೊಸ ಸ್ವರೂಪದಲ್ಲಿ ಜಾರಿಗೆ ಬರಲಿದ್ದು, 100ರ ಬದಲು 125 ದಿನಗಳ ಉದ್ಯೋಗವನ್ನು ನೀಡುವ ಗುರಿ ಇದೆ.
2006ರಲ್ಲಿ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತರಿ ನೀಡುವ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು. ಇದಕ್ಕೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ಮನರೇಗಾ) ಎಂದು ನಾಮಕರಣ ಮಾಡಲಾಗಿತ್ತು, 2006ರಲ್ಲಿ ಯೋಜನೆ ಜಾರಿಯಾಗಿತ್ತು.
ಈ ಯೋಜನೆಯಡಿ ಗ್ರಾಮೀಣ ಭಾಗದ ಬಡ ಜನರಿಗೆ ಅವರ ಗ್ರಾಮದಲ್ಲಿಯೇ ವರ್ಷದಲ್ಲಿ 100 ದಿನಗಳ ಖಾತರಿ ಉದ್ಯೋಗವನ್ನು ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆಯನ್ನು ರಾಜ್ಯ ಸರ್ಕಾರ ಉಸ್ತುವಾರಿ ಮಾಡುತ್ತಿತ್ತು. ಆದರೆ ಈಗ ಯೋಜನೆಯ ಹೆಸರು, ಸ್ವರೂಪ ಬದಲಾವಣೆ ಮಾಡಲಾಗಿದೆ.
ವಿಬಿ-ಜಿ ರಾಮ್‌ಜಿ ಯೋಜನೆಯಡಿ ಈಗ 100ರ ಬದಲು 125 ದಿನಗಳ ಉದ್ಯೋಗವನ್ನು ನೀಡುವ ಗುರಿ ಹೊಂದಲಾಗಿದೆ. ಅಲ್ಲದೇ ಯೋಜನೆಯಲ್ಲಿ ರಾಜ್ಯಕ್ಕೆ ಸಹ ವೆಚ್ಚದ ಜವಾಬ್ದಾರಿ ನೀಡಲಾಗಿದೆ. ವಿರೋಧ ಪಕ್ಷಗಳು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ಮನರೇಗಾ) ಹೆಸರು ಬದಲಾವಣೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದವು.
ಮನರೇಗಾ ಯೋಜನೆಯ ಹೆಸರು ಬದಲಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ನಿರ್ಧಾರವು ಮಹಾತ್ಮ ಗಾಂಧಿಯವರ ಬಗ್ಗೆ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಇರುವ ದ್ವೇಷ, ಅಸೂಯೆಯನ್ನು ತೋರುತ್ತದೆ. ವಿದೇಶಗಳಲ್ಲಿ ಗಾಂಧಿಯವರನ್ನು ಜಪಿಸುವ ಪ್ರಧಾನಿಗಳು ತಮ್ಮದೇ ದೇಶದಲ್ಲಿ ಗಾಂಧಿ ಹೆಸರಿಗೆ ಅಪಚಾರ ಮಾಡಲು ಹೊರಟಿರುವುದು ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಮಸೂದೆ ಅಂಗೀಕಾರದ ಕುರಿತು ಮಾತನಾಡಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ದೇಶದ ಗ್ರಾಮಗಳನ್ನು ಬಲಪಡಿಸುವ ಉದ್ದೇಶದಿಂದ ವಿಬಿ-ಜಿ ರಾಮ್‌ಜಿ ಯೋಜನೆಯನ್ನು ತರಲಾಗಿದೆ. ಬಡವರನ್ನು ಸಬಲೀಕರಣಗೊಳಿಸುವ ಮತ್ತು ಗ್ರಾಮ ಹಾಗೂ ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಆಲೋಚನೆ ಇದರ ಹಿಂದಿದೆ. ಭಾರತದ ಆತ್ಮವು ಹಳ್ಳಿಗಳಲ್ಲಿ ವಾಸಿಸುತ್ತದೆ ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ್ದರು. ಆ ಹಳ್ಳಿಗಳನ್ನು ಬಲಪಡಿಸುವ ಉದ್ದೇಶದಿಂದಲೇ ಈ ಯೋಜನೆಯನ್ನು ತರಲಾಗಿದೆ ಎಂದು ಹೇಳಿದರು.
ಈ ಮಸೂದೆಯನ್ನು ಅಂಗೀಕರಿಸುವ ಸಂದರ್ಭದಲ್ಲಿ ವಿರೋಧ ಪಕ್ಷಗಳು ನಡೆದುಕೊಂಡ ರೀತಿ ನಾಚಿಕೆಗೇಡಿನ ಸಂಗತಿ. ದೇಶದ ಅತ್ಯಂತ ಹಳೆಯ ಪಕ್ಷವು ಹಳೆಯ ಸಂಪ್ರದಾಯಗಳನ್ನು ತುಳಿದುಹಾಕಿದೆ, ಇದನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ನೀವು ವಿರೋಧಿಸಿ, ಹಾಗೆ ಮಾಡಲು ನಿಮಗೆ ಹಕ್ಕಿದೆ. ಆದರೆ ಶಿಷ್ಟಾಚಾರವನ್ನು ಗಾಳಿಗೆ ತೂರಿ ನಿಮ್ಮ ಮನಸ್ಥಿತಿಯನ್ನು ಪ್ರದರ್ಶಿಸಲು ಮುಂದಾದರೆ, ನಿಮ್ಮ ಆಲೋಚನೆಗಳನ್ನು ಈ ರೀತಿ ಮಂಡಿಸಿದರೆ, ಅದು ಸಂಪ್ರದಾಯ ವಿರೋಧಿ ಮತ್ತು ಒಪ್ಪಲಾಗುವುದಿಲ್ಲ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


