ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಶಕ್ತಿ’. ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಬಹುದು. ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವತಂತ್ರ ನಿರ್ಣಯ ಕೈಗೊಂಡು ಸ್ವಾವಲಂಬಿ ಬದುಕಿನೆಡೆಗೆ ಪಯಣಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿ ಮಾಡಲಾಗಿದೆ.
ಆದರೆ ಸಾರಿಗೆ ನಿಗಮಗಳಿಗೆ ‘ಶಕ್ತಿ’ ಯೋಜನೆ ಹೊರೆಯಾಗಿದೆ. ಯೋಜನೆಯಡಿ ಉಚಿತ ಟಿಕೆಟ್ ನೀಡಿರುವ ಸಾರಿಗೆ ನಿಗಮಗಳಿಗೆ ಕೋಟ್ಯಾಂತರ ರೂಪಾಯಿ ಬಾಕಿಯನ್ನು ಸರ್ಕಾರ ಉಳಿಸಿಕೊಂಡಿದೆ. ಸರ್ಕಾರದಿಂದ ಅನುದಾನ ಬಾರದೇ, ಆದಾಯ ಇಲ್ಲದೇ ಸಾರಿಗೆ ನಿಗಮಗಳು ಕಂಗಾಲಾಗಿವೆ.
ಬೆಳಗಾವಿಯಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನದಲ್ಲಿ ‘ಶಕ್ತಿ’ ಯೋಜನೆ ಜಾರಿಯಾದ ದಿನದಿಂದ ಇಲ್ಲಿಯವರೆಗೂ ಸಾರಿಗೆ ಸಂಸ್ಥೆಗೆ ಸರ್ಕಾರ ನೀಡಬೇಕಿರುವ ಬಾಕಿ ಎಷ್ಟು? ಎಂದು ಪ್ರಶ್ನಿಸಿಲಾಗಿತ್ತು. ಸರ್ಕಾರ ಈ ಪ್ರಶ್ನೆಗೆ ಉತ್ತರವನ್ನು ನೀಡಿದೆ.
ಸರ್ಕಾರ ತನ್ನ ಉತ್ತರದಲ್ಲಿ ‘ಶಕ್ತಿ’ ಯೋಜನೆ ಜಾರಿಗೆ ಬಂದ ದಿನಾಂಕ 11/6/2025ರಿಂದ ನವೆಂಬರ್ 25ರ ತನಕ ರಾಜ್ಯದ 4 ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಈ ತನಕ 650 ಕೋಟಿ ಫಲಾನುಭವಿಗಳು ಪ್ರಯಾಣಿಸಿದ್ದಾರೆ ಎಂದು ಹೇಳಿದೆ.
ಈ ಯೋಜನೆಗೆ ಸರ್ಕಾರದಿಂದ ಬಿಡುಗಡೆ ಮಾಡಲಾದ ಬಾಕಿ ಮೊತ್ತದ ವಿವರವನ್ನು ನೀಡಿದೆ. ಇದುವರೆಗೂ ಸರ್ಕಾರ ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿರುವ ಮೊತ್ತ ಕೋಟಿ ರೂ.ಗಳಲ್ಲಿ 11748.77. ಆಗಿದೆ.
2023-24ರಲ್ಲಿ 1180.62 ಕೋಟಿ, 2024-25ರಲ್ಲಿ 1170.45 ಕೋಟಿ ಮತ್ತು 2025-26ರಲ್ಲಿ 1655.40 ಕೋಟಿ ರೂ. ಬಿಡುಗಡೆ ಮಾಡಬೇಕಿದೆ. ಒಟ್ಟು ಬಾಕಿ ಇರುವ ಮೊತ್ತ 4006.47 ಕೋಟಿ ರೂ.ಗಳು.

ಬಿಜೆಪಿ ಪ್ರತಿಕ್ರಿಯೆ: ಈ ಉತ್ತರಕ್ಕೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು: ಸಾರಿಗೆ ನಿಗಮಗಳಿಗೆ ಶಕ್ತಿ ಅಲ್ಲ, ಶಾಪ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, ‘ಕಾಂಗ್ರೆಸ್ ಪಕ್ಷವು ಚುನಾವಣಾ ಸಮಯದಲ್ಲಿ ಆಶ್ವಾಸನೆ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ 2025ರ ನವೆಂಬರ್ 25ರವರೆಗೆ, ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಸರ್ಕಾರ ಒಟ್ಟಾರೆ ₹4,006.47 ಕೋಟಿ ಬಾಕಿ ಉಳಿಸಿಕೊಂಡಿದ್ದು, ಇದರ ಪರಿಣಾಮವಾಗಿ ಸಾರಿಗೆ ಸಂಸ್ಥೆಗಳು ಗಂಭೀರ ನಷ್ಟದ ಹಾದಿಗೆ ತಳ್ಳಲ್ಪಟ್ಟಿವೆ’ ಎಂದು ಹೇಳಿದ್ದಾರೆ.
ಈ ನಾಲ್ಕು ನಿಗಮಗಳಿಗೆ,
* 2023–24ನೇ ಸಾಲಿನಲ್ಲಿ ₹1,180.62 ಕೋಟಿ,
* 2024–25ನೇ ಸಾಲಿನಲ್ಲಿ ₹1,170.45 ಕೋಟಿ,
* 2025–26ನೇ ಸಾಲಿನ ನವೆಂಬರ್ 25 ರ ಅಂತ್ಯಕ್ಕೆ ₹1,655.40 ಕೋಟಿ ಬಾಕಿಯಾಗಿದ್ದು,
ಒಟ್ಟಾರೆ ಬಾಕಿ ಮೊತ್ತ ₹4,006.47 ಕೋಟಿಗೆ ತಲುಪಿದೆ.
ಶಕ್ತಿ ಯೋಜನೆ ಅಡಿಯಲ್ಲಿ ಇದುವರೆಗೆ ಸುಮಾರು 650 ಕೋಟಿ ಫಲಾನುಭವಿಗಳು ಪ್ರಯಾಣ ನಡೆಸಿದ್ದಾರೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗಾರೆಡ್ಡಿ ಅವರು ಭರ್ಜರಿ ಪ್ರಚಾರ ಮಾಡಿದ್ದರು. ಸಾರಿಗೆ ನಿಗಮಗಳು ಆರ್ಥಿಕ ನಷ್ಟದಲ್ಲಿಲ್ಲ, ಲಾಭದಲ್ಲಿವೆ ಎಂಬ ಹಸಿ ಸುಳ್ಳುಗಳನ್ನು ನುಡಿದಿದ್ದರು. ಆದರೆ, ವಾಸ್ತವದಲ್ಲಿ ಸರ್ಕಾರ ನೀಡಿರುವ ಅಧಿಕೃತ ಅಂಕಿ-ಅಂಶಗಳು, ಶಕ್ತಿ ಯೋಜನೆಯ ಬಾಕಿ ಹಣದಿಂದ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿ ಯಾವ ಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿವೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಸಾರಿಗೆ ನಿಗಮಗಳು ಈಗಾಗಲೇ ಸತತವಾಗಿ ಭಾರೀ ನಷ್ಟವನ್ನು ಅನುಭವಿಸುತ್ತಿದ್ದು, ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ, ಸರ್ಕಾರದಿಂದ ಹಣ ಪಾವತಿ ಸರಿಯಾಗಿ ಆಗದೇ ಈ ನಷ್ಟ ಇನ್ನಷ್ಟು ಹೆಚ್ಚಾಗಿದೆ. ಕಾಂಗ್ರೆಸ್ ಸರ್ಕಾರವು ಸಾರಿಗೆ ನಿಗಮಗಳನ್ನು ನಷ್ಟದ ಸುಳಿಯಿಂದ ಹೊರತರುವ ಬದಲು, ಅವುಗಳನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರವು ಸಾರಿಗೆ ನಿಗಮಗಳನ್ನು ಸಂಪೂರ್ಣವಾಗಿ ನಷ್ಟದಿಂದ ಮೇಲಕ್ಕೆತ್ತಲು ವಿಫಲವಾಗಿದ್ದು, ಅವುಗಳ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸಿರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


