ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು ದುರುಪಯೋಗಪಡಿಸಿಕೊಂಡಿದ್ದಾರೆ, 2000 ಕೋಟಿ ರೂಪಾಯಿಗಳ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ರಾಜ್ಯಪಾಲರಿಗೆ ದೂರನ್ನು ನೀಡಿದ್ದರು.
ಈ ದೂರು ಇದೀಗ ಮುನಿರತ್ನ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗಿದೆ. ಇತ್ತೀಚೆಗಷ್ಟೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಡಿಕೆಶಿ ಮುನಿರತ್ನ ಹೆಸರೇಳದೇ ವೇದಿಕೆ ಮೇಲೆಯೇ ಅವನು ಯಾವನೋ ಒಬ್ಬ ಚಂಗ್ಲು ಹೋಗಿ ರಾಜ್ಯಪಾಲರ ಬಳಿ ದೂರು ಕೊಟ್ಟಿದ್ದಾನೆ ಎಂದು ಕಿಡಿಕಾರಿದ್ದರು.
ಈ ಹೇಳಿಕೆ ಬಗ್ಗೆ ಇಂದು ( ಏಪ್ರಿಲ್ 19 ) ವಿಶೇಷ ಸುದ್ದಿಗೋಷ್ಟಿ ನಡೆಸುವ ಮೂಲಕ ಪ್ರತಿಕ್ರಿಯಿಸಿರುವ ಡಿಕೆಶಿ ಅವರ ಪದಬಳಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನೂ ಸಹ ಜನರ ಆಶೀರ್ವಾದದಿಂದ ಓರ್ವ ಶಾಸಕನಾಗಿದ್ದೇನೆ, ಓರ್ವ ಉಪಮುಖ್ಯಮಂತ್ರಿಯಾಗಿ ಅಂತಹ ಪದ ಬಳಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಭಾರತದ ಪ್ರಜಾಪ್ರಭುತ್ವದಲ್ಲಿ ಯಾರೇ ತಪ್ಪು ಮಾಡಿದರೂ ದೂರು ಕೊಡುವ ಹಕ್ಕು ಎಲ್ಲರಿಗೂ ಇದೆ, ಇಷ್ಟು ದೊಡ್ಡ ಹಗರಣ ನಡೆದಿದೆ ಎಂದು ದೂರು ನೀಡಿದರೆ ನನ್ನನ್ನು ಚಂಗ್ಲು ಅಂತಾರೆ. ದೂರು ಸುಳ್ಳು ಎನ್ನುವುದಾದರೆ ಅದರ ಕುರಿತು ಮಾತನಾಡಬೇಕು, ಅದನ್ನು ಬಿಟ್ಟು ಚಂಗ್ಲು ಎಂದು ಪದ ಬಳಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


