Tuesday, November 3, 2026
spot_img
More
    spot_img
    HomeStateDistrict1 ಕೆಜಿ ಅಕ್ಕಿ ರೇಟು 60 ರೂಪಾಯಿ ದಾಟಿ ಹೋಗಲಿದೆ!

    1 ಕೆಜಿ ಅಕ್ಕಿ ರೇಟು 60 ರೂಪಾಯಿ ದಾಟಿ ಹೋಗಲಿದೆ!

    ನಿರ್ದೇಶಕ ಯೋಗರಾಜ್ ಭಟ್ ‘ಜಾಕಿ’ ಸಿನಿಮಾದಲ್ಲಿ 1 ಕೆಜಿ ಅಕ್ಕಿ ರೇಟು 30 ರೂ. ಆಗಿ ಹೋಯಿತು ಎಂದು ಹಾಡು ಬರೆದಿದ್ದರು. ಆದರೆ ಮುಂದಿನ ವರ್ಷ ಅಕ್ಕಿ ರೇಟು 60 ರೂ. ದಾಟಿ ಹೋಗಲಿದೆ. ಕರ್ನಾಟಕದಲ್ಲಿ ಅಕ್ಕಿಯ ಕೊರತೆ ಎದುರಾಗಲಿದ್ದು, ದರ ಹೆಚ್ಚಳವಾಗುವುದು ಖಚಿತವಾಗಿದೆ.

    ಕರ್ನಾಟಕದಲ್ಲಿ ಅತ್ಯಧಿಕ ಭತ್ತವನ್ನು ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಆದರೆ ಈ ವರ್ಷ ಈ ಅಚ್ಚುಕಟ್ಟು ಪ್ರದೇಶದಲ್ಲಿ 2ನೇ ಬೆಳೆಗೆ ನೀರು ಇಲ್ಲ ಎಂದು ಹೇಳಲಾಗಿದೆ. ಆದ್ದರಿಂದ ಭತ್ತ ಬೆಳೆಯಲು ಸಾಧ್ಯವಿಲ್ಲ.

    ಈಗಾಗಲೇ ಕರ್ನಾಟಕ ಸರ್ಕಾರ ತುಂಗಭದ್ರಾ ಡ್ಯಾಂ ಅಚ್ಚುಕಟ್ಟು ಪ್ರದೇಶದಲ್ಲಿ 2ನೇ ಬೆಳೆಗೆ ನೀರು ಇಲ್ಲ ಎಂದು ಘೋಷಣೆ ಮಾಡಿದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯ ಸೇರಿ ಈ ಅಚ್ಚುಕಟ್ಟು ಭಾಗದಲ್ಲಿ 12.5 ಲಕ್ಷ ಎಕರೆಗೂ ಅಧಿಕ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ.

    ಸುಮಾರು 2.5 ಕೋಟಿ ಕ್ವಿಂಟಾಲ್ ಭತ್ತವನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಇರುವ ಈ ಪ್ರದೇಶದಲ್ಲಿ ಈ ಬಾರಿ 2ನೇ ಬೆಳೆಗೆ ಭತ್ತವನ್ನು ಬೆಳೆಯುವುದಿಲ್ಲ. ಆದ್ದರಿಂದ ಭತ್ತದ ಉತ್ಪಾದನೆ ಕುಸಿತವಾಗಲಿದ್ದು, ಅಕ್ಕಿಯ ಸರಬರಾಜು ಮೇಲೆ ಪರಿಣಾಮ ಬೀರಲಿದೆ.

    ಏಕೆ ನೀರು ಬಿಡುವುದಿಲ್ಲ: ಈ ಬಾರಿ ನೈಋತ್ಯ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಡ್ಯಾಂಗಳು ಭರ್ತಿಯಾಗಿವೆ. ಆದರೂ ಸಹ ಬೇಸಿಗೆಯಲ್ಲಿ 2ನೇ ಬೆಳೆಗೆ ನೀರು ಏಕೆ ಬಿಡುವುದಿಲ್ಲ? ಎಂಬ ಪ್ರಶ್ನೆ ಸಹಜ.

    ತುಂಗಭದ್ರಾ ಡ್ಯಾಂನ 75 ವರ್ಷಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಕ್ರಸ್ಟ್‌ಗೇಟ್ ದುರಸ್ತಿ ಮಾಡಲಾಗುತ್ತಿದೆ. ಆದ್ದರಿಂದ 2ನೇ ಬೆಳೆಗೆ ನೀರು ಕೊಡದಿರಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಇದಕ್ಕೆ ರೈತರು ವಿರೋಧ ಸಹ ವ್ಯಕ್ತಪಡಿಸಿದ್ದಾರೆ.

    ಡ್ಯಾಂನ 34 ಕ್ರಸ್ಟ್‌ಗೇಟ್‌ಗಳ ಪೈಕಿ ಶೇ 30ರಿಂದ 40ರಷ್ಟು ಎಲ್ಲವೂ ಶಿಥಿಲಗೊಂಡಿವೆ. ದುರಸ್ತಿ ಅನಿವಾರ್ಯ ಎಂದು ಕೇಂದ್ರ ಜಲ ಆಯೋಗ ವರದಿ ನೀಡಿದೆ. ಡಿಸೆಂಬರ್‌ನಿಂದ ಕ್ರಸ್ಟ್‌ಗೇಟ್ ದುರಸ್ತಿ ಕಾರ್ಯ ಆರಂಭವಾಗಲಿದೆ. ಆದ್ದರಿಂದ ಡ್ಯಾಂ ನೀರಿನ ಮಟ್ಟವನ್ನು 40 ಟಿಎಂಸಿಗೆ ಇಳಿಕೆ ಮಾಡಲಾಗುತ್ತದೆ.

    ಡ್ಯಾಂ ಅಚ್ಚುಕಟ್ಟು ಪ್ರದೇಶದಲ್ಲಿ ಸೋನಾ ಮಸೂರಿ, ಆರ್‌ಎನ್ಆರ್ ಎನ್ನುವ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. 2ನೇ ಬೆಳೆಯಲ್ಲಿ ಭತ್ತವನ್ನು ಬೆಳೆಯಬೇಡಿ, ನೀರು ಇಲ್ಲವಾದಲ್ಲಿ ನಾವು ಹೊಣೆಯಲ್ಲ ಎಂದು ಡ್ಯಾಂ ಅಧಿಕಾರಿಗಳು ಈಗಾಗಲೇ ರೈತರಿಗೆ ಎಚ್ಚರಿಕೆ ನೀಡಿದ್ದಾರೆ.

    ಈಗ ಮುಂಗಾರು ಹಂಗಾಮಿನ ಭತ್ತದ ಕಟಾವು ಮುಗಿದರೆ 2ನೇ ಬೆಳೆಯಲ್ಲಿ ರೈತರು ಭತ್ತವನ್ನು ಬೆಳೆಯುವಂತ್ತಿಲ್ಲ. ಆದ್ದರಿಂದ ದಲ್ಲಾಳಿಗಳು, ವ್ಯಾಪಾರಿಗಳು ಭತ್ತದ ಅಭಾವ ಸೃಷ್ಟಿ ಮಾಡಿ, ಅಕ್ಕಿರ ದರವನ್ನು ಏರಿಕೆ ಮಾಡಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

    ಭತ್ತಕ್ಕೆ ಪರ್ಯಾಯ ಬೆಳೆ ಬೆಳೆಯಲು ರೈತರಿಗೆ ಸಲಹೆ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ 2ನೇ ಬೆಳೆಗೆ ನೀರಿಲ್ಲದೇ ಇರುವುದರಿಂದ ಭತ್ತಕ್ಕೆ ಪರ್ಯಾಯ ಕೆಲವು ಬೆಳೆ ಬೆಳೆಯಲು ಕೊಪ್ಪಳ ಕೃಷಿ ಇಲಾಖೆ ಹಾಗೂ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದಿಂದ ಸಲಹೆಗಳನ್ನು ನೀಡಲಾಗಿದೆ.

    ಭತ್ತದ ಬದಲಾಗಿ ಸಾಸಿವೆ (ಎನ್.ಆರ್.ಸಿ.ಹೆಚ್.ಬಿ-101, ಪಿ.ಎಮ್-30, ಕೆ.ಎಮ್-29), ಎಳ್ಳು (ಶ್ವೇತಾ, ವಿ.ಆರ್.ಐ-1), ಮೆಕ್ಕೆಜೋಳ (ಆರ್.ಸಿ.ಎಮ್.ಎಚ್-2 & 4, ಒಂದು ಅಥವಾ ಎರಡು ನೀರು ಕೊಡಬೇಕು), ಕಡಲೆ (ಅಣ್ಣಿಗೇರಿ-1, ಜೆಜಿ-11, ಬಿ.ಜಿ.ಡಿ-103), ಸೂರ್ಯಕಾಂತಿ (ಕೆ.ಬಿ.ಎಸ್.ಹೆಚ್-44, 53) (ಆರ್.ಎಫ್.ಎಸ್.ಹೆಚ್-700, ಆರ್.ಎಫ್.ಎಸ್.ಹೆಚ್-1877), ಹೆಸರು (ಬಿ.ಜಿ.ಎಸ್-9, ಪಿ.ಡಿ.ಎಮ್-139), ಭತ್ತ ಉದ್ದು (ಡಿ.ಯು-1, ಎಲ್.ಬಿ.ಜಿ-752), ಹುರುಳಿ (ಕ್ರೀಡಾ-1, ಪಿ.ಹೆಚ್.ಜಿ-9), ಅಲಸಂದಿ (ಸಿ-152, ಡಿ.ಸಿ.-15) ಬೆಳೆಯಬಹುದು ಎಂದು ಸಲಹೆ ಕೊಡಲಾಗಿದೆ.

    ನೀರು ಲಭ್ಯವಿದ್ದರೆ ಟೊಮೆಟೋ, ಕಲ್ಲಂಗಡಿ, ಸೌತೆಕಾಯಿ, ಬೆಂಡೆಕಾಯಿ, ಹೀರೆಕಾಯಿ, ಬೀಟ್‌ರೂಟ್, ಈ ತರಕಾರಿಗಳನ್ನು ಬೆಳೆಯಬಹುದು. ಸೊಪ್ಪಿನ ಬೆಳೆಗಳಾದ ಪಾಲಕ್, ಮೆಂತ್ಯೆ, ಸಬ್ಬಸಿಗೆ, ರಾಜಗಿರಿ, ಉಳ್ಳಿಚಿಕಾ, ಖಾಸಗಿ ತಳಿಗಳನ್ನು ಬೆಳೆಯಬಹುದು. ಉಳಿದಿರುವ ತೇವಾಂಶದಿಂದ ಹಸಿರೆಲೆ ಡಯಾಂಚಾ, ಸೆಣಬು, ಪಿಳ್ಳೆಪೆಸರು ಸಹ ಬೆಳೆಯಬಹುದು.

    ನೀರು ಲಭ್ಯ ಇರುವ ಪ್ರದೇಶದಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ಈರುಳ್ಳಿ, ತರಕಾರಿ ಬೆಳೆಗಳನ್ನು ಬೆಳೆಯಬಹುದು. ಕಡಿಮೆ ನೀರಿರುವ ಪ್ರದೇಶದಲ್ಲಿ ಶೇಂಗಾ, ಹೆಸರು, ಉದ್ದು, ಸೂರ್ಯಕಾಂತಿ, ಅಲಸಂದಿ ಹಾಗೂ ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಊದಲು, ಬರಗು ಮತ್ತು ಅತಿ ಕಡಿಮೆ ನೀರಿರುವ ಪ್ರದೇಶದಲ್ಲಿ ಸಾಸಿವೆ, ಕುಸುಬೆ, ಹುರುಳಿ, ಹಿಂಗಾರಿ ಜೋಳ, ಹೆಸರು, ಉದ್ದು ಬೆಳೆಯಬಹುದಾಗಿದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search