ಹೈದರಾಬಾದ್: ಅಲ್ಲು ಅರ್ಜುನ್ ನಟನೆಯ ಪುಷ್ಪ ದ ರೂಲ್ ಚಿತ್ರದ ಪ್ರೀಮಿಯರ್ ಶೋ ಪ್ರದರ್ಶನದ ವೇಳೆ ನಗರದ ಸಂದ್ಯಾ ಚಿತ್ರಮಂದಿರದಲ್ಲಿ ಬೃಹತ್ ಸಂಖ್ಯೆಯ ಜನ ಸೇರಿ ನೂಕು ನುಗ್ಗಲು ಉಂಟಾಗಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 39 ವರ್ಷದ ಮಹಿಳೆ ರೇವತಿ ಎಂಬುವವರು ಸಾವನ್ನಪ್ಪಿದ್ದರು.
ರೇವತಿ ಜತೆ ಚಿತ್ರ ನೋಡಲು ಬಂದಿದ್ದ ಆಕೆಯ ಮಗ ಶ್ರೀತೇಜಾ ಕಾಲ್ತುಳಿತದಲ್ಲಿ ಸಿಲುಕಿ ಪ್ರಜ್ಞೆ ತಪ್ಪಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಕಳೆದ ಎರಡು ವಾರಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ಬಾಲಕನ ಆರೋಗ್ಯದ ಅಪ್‌ಡೇಟ್ ನೀಡಿರುವ ಹೈದ್ರಾಬಾದ್ ಸಿಟಿ ಪೊಲೀಸ್ ಕಮಿಷನರ್ ಸಿ.ವಿ ಆನಂದ್ ಬಾಲಕನ ಸ್ಥಿತಿ ಗಂಭೀರವಾಗಿದ್ದು, ಮೆದುಳು ನಿಷ್ಕ್ರಿಯಗೊಂಡಿದೆ ಎಂಬ ಮಾಹಿತಿ ನೀಡಿದ್ದಾರೆ.
ಬಾಲಕ ದಾಖಲಾಗಿದ್ದ ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಕಮಿಷನರ್ ಭೇಟಿ ನೀಡಿದ್ದರು. ಬಳಿಕ ಈ ಕುರಿತು ಪೊಲೀಸ್ ಕಮಿಷನರ್ ಸಿ.ವಿ ಆನಂದ್ ಮಾತನಾಡಿ, ಕಾಲ್ತುಳಿತದ ಸಂದರ್ಭದಲ್ಲಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಬಾಲಕ ಶ್ರೀತೇಜ ಸ್ಥಿತಿ ಮತ್ತಷ್ಟು ಗಂಭೀರವಾಗಿತ್ತು. ಇದೀಗ ಬಾಲಕನ ಮೆದುಳು ನಿಷ್ಕ್ರಿಯಗೊಂಡಿದೆ. ಸದ್ಯ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ದೀರ್ಘಾವಧಿಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀತೇಜಾ ಅವರ ಆರೋಗ್ಯದ ಕುರಿತು ಶೀಘ್ರದಲ್ಲೇ ವೈದ್ಯಕೀಯ ಬುಲೆಟಿನ್ ಅನ್ನು ಸಹ ವೈದ್ಯರು ಬಿಡುಗಡೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಲ್ಲು ಅರ್ಜುನ್ ಬಂಧನ ಬಿಡುಗಡೆ: ಇನ್ನು ರೇವತಿ ಸಾವಿಗೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಮನೆಯಲ್ಲಿ ಅಲ್ಲು ಅರ್ಜುನ್ ಅವರನ್ನು ಬಂಧಿಸಿ ಬಳಿಕ ಜಾಮೀನು ಸಿಕ್ಕ ಕಾರಣ ಮಾರನೇ ದಿನ ಬಿಡುಗಡೆ ಮಾಡಲಾಯಿತು. ಸದ್ಯ ಬಾಲಕನ ಸ್ಥಿತಿ ಸಹ ಗಂಭೀರವಾಗಿರುವುದು ಪ್ರಕರಣದ ಗಂಭೀರತೆಯನ್ನು ಏರಿಸಲಿದ್ದು, ಅಲ್ಲು ಅರ್ಜುನ್‌ಗೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


