ಕಾರವಾರ: ಇತ್ತೀಚೆಗಷ್ಟೆ ಶೈಕ್ಷಣಿಕ ಪ್ರವಾಸ ತೆರಳಿದ್ದ ಕೋಲಾರ ಮೂಲದ ಮೂವರು ವಿದ್ಯಾರ್ಥಿನಿಯರು ಮುರುಡೇಶ್ವರ ಬೀಚ್‌ನಲ್ಲಿ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೋರ್ವ ವಿದ್ಯಾರ್ಥಿ ಪ್ರವಾಸದ ವೇಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಭಟ್ಕಳ ನಗರದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಯಲಬುರ್ಗ ತಾಲೂಕಿನ ಗಾಣದಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ ( 14 ) ನಗರದ ತಾಲೂಕು ಪಂಚಾಯತ್ ಕಚೇರಿ ಎದುರಿನ ಖಾಲಿ ಜಾಗದಲ್ಲಿ ಮೂತ್ರ ವಿಸರ್ಜನೆ ಮಾಡಲೆಂದು ತೆರಳಿದಾಗ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ಗಾಣದಾಳ ಶಾಲೆಯ 100 ವಿದ್ಯಾರ್ಥಿಗಳು ಜೋಗ ಫಾಲ್ಸ್, ಕೊಲ್ಲೂರು ಮತ್ತಿತರ ಕಡೆ ಪ್ರವಾಸಕ್ಕೆಂದು ಎರಡು ಬಸ್‌ನಲ್ಲಿ ಆಗಮಿಸಿದ್ದರು. ಇವರೊಂದಿಗೆ 13 ಮಂದಿ ಶಿಕ್ಷಕರು ಸಹ ಇದ್ದರು. ನಿನ್ನೆ ರಾತ್ರಿ ಗಾಣದಾಳದಿಂದ ಹೊರಟಿದ್ದ ವಿದ್ಯಾರ್ಥಿಗಳು ಇಂದು ಬೆಳಗ್ಗೆ ಜೋಗ ಜಲಪಾತ ವೀಕ್ಷಿಸಿದ್ದರು. ಅಲ್ಲಿಂದ ಕೊಲ್ಲೂರಿಗೆ ತೆರಳಲು ಅರಬೈಲ್ ಘಟ್ಟದ ಮೂಲಕ ಹೊನ್ನಾವರ ಮಾರ್ಗವಾಗಿ ತೆರಳುತ್ತಿದ್ದರು. ಮಾರ್ಗ ಮಧ್ಯ ಭಟ್ಕಳದಲ್ಲಿ ಮಾತ್ರೆ ಖರೀದಿಗಾಗಿ ನಿಲ್ಲಿಸಲಾಗಿತ್ತು. ತಾಲೂಕು ಪಂಚಾಯತ್ ಕಚೇರಿ ಎದುರಿನ ಔಷಧಿ ಅಂಗಡಿಯಲ್ಲಿ ಮಾತ್ರೆ ಖರೀದಿಸಲು ವಾಹನ ನಿಲ್ಲಿಸಲಾಗಿತ್ತು. ಈ ಸಂದರ್ಭ ಕೆಲವು ಬಾಲಕರು ಮೂತ್ರ ವಿಸರ್ಜನೆಗೆಂದು ಔಷಧಿ ಅಂಗಡಿಯ ಹಿಂದಿರುವ ಖುಲ್ಲಾ ಜಾಗಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕತ್ತಲಾಗಿದ್ದರಿಂದ ತಡೆಗೋಡೆ ಇಲ್ಲದ ತೆರೆದ ಬಾವಿಗೆ ಬಾಲಕ ಬಿದ್ದಿದ್ದಾನೆ.
ತಕ್ಷಣ ಜೊತೆಗಿದ್ದ ಬಾಲಕರು ಕೂಗಿದ್ದರಿಂದ ಸ್ಥಳೀಯರು ದೌಡಾಯಿಸಿ, ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಅಸ್ವಸ್ಥಗೊಂಡ ಬಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲು ಪ್ರಯತ್ನಿಸಿದರೂ ಸ್ಪಂದಿಸದೆ ಮೃತಪಟ್ಟಿದ್ದಾನೆ. ಭಟ್ಕಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


