ಬೆಳಗಾವಿ: ಪ್ರತಿಪಕ್ಷಗಳ ಪ್ರಬಲ ವಿರೋಧದ ನಡುವೆಯೂ 2025ನೇ ಸಾಲಿನ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.
ವಿಧಾನಪರಿಷತ್ ನಲ್ಲಿ ವಿಧೇಯಕ ಮೇಲ್ಮನನೆಯಲ್ಲಿ ಅಂಗೀಕಾರವಾಗುವುದಷ್ಟೇ ಬಾಕಿ ಇದೆ.
ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ವಿಧೇಯಕವನ್ನು ಪ್ರಬಲವಾಗಿ ವಿರೋಧಿಸಿದ ಪರಿಣಾಮ ಎರಡು ಬಾರಿ ಸದನವನ್ನು ಮುಂದೂಡಲಾಯಿತು. ವಿಧೇಯಕದ ಪ್ರತಿಗಳನ್ನು ಹರಿದು ಎಸೆಯಲಾಯಿತು.ಸರ್ಕಾರ ಮಂಡಿಸಿದ್ದ ಮಸೂದೆಗೆ ವಿಪಕ್ಷಗಳ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು. ವಿಧೇಯಕದ ಪ್ರತಿಗಳನ್ನು ಹರಿದು ಬಿಸಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ವಿಪಕ್ಷಗಳ ವಿರೋಧ ಹೆಚ್ಚಾಗುತ್ತಿದ್ದಂತೆ ಗದ್ದಲದ ನಡುವೆಯೇ ಮಸೂದೆಯನ್ನು ಸರ್ಕಾರ ಅಂಗೀಕಾರಪಡೆದುಕೊಂಡಿತು. ಸಭಾಧ್ಯಕ್ಷ ಯು.ಟೊ ಖಾದರ್ ಆಡಳಿತ ಮತ್ತು ಪ್ರೆತಿಪಕ್ಷಗಳ ಸದಸ್ಯರ ಡುವೆ ನಡೆಸಿದ ಸಂಧಾನವೂ ಫಲ ಕೊಡಲಿಲ್ಲ.
ದ್ವೇಷ ಭಾಷಣ ತಡೆ ವಿಧೇಯಕವು ಸಾಮಾಜಿಕ ಸಾಮರಸ್ಯ ಕಾಪಾಡುವ ಉದ್ದೇಶ ಹೊಂದಿದ್ದು, ದ್ವೇಷ ಭಾಷಣ ನೀಡುವವರಿಗೆ ಕಠಿಣ ಶಿಕ್ಷೆ ವಿಧಿಸುವ ನಿಬಂಧನೆಗಳನ್ನು ಒಳಗೊಂಡಿದೆ. ಸರ್ಕಾರ ಈ ಬಿಲ್ ಅನಿವಾರ್ಯ ಎಂದು ಹೇಳಿದ್ದರೂ, ಬಿಜೆಪಿ ಇದನ್ನು ಮಾತು ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹದ್ದು ಎಂದು ಟೀಕಿಸಿದೆ.
ವಿಧೇಯಕ ಅಂಗೀಕಾರಗೊಳ್ಳುತ್ತಿದ್ದಂತೆ ಸಚಿವ ಭೈರತಿ ಸುರೇಶ್ ಮತ್ತು ಬಿಜೆಪಿ ಶಾಸಕ ಚನ್ನಬಸಪ್ಪ ನಡುವೆ ಏಕವಚನದಲ್ಲಿ ವಾಕ್ಸಮರ ನಡೆಯಿತು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಯೂ ಟಿ ಖಾದರ್ ಸದನವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು. ವಿಧೇಯಕ ಅಂಗೀಕಾರದ ವೇಳೆ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.. ಅಲ್ಲದೇ ಸಚಿವ ಭೈರತಿ ಸುರೇಶ್ ಕರಾವಳಿ ಭಾಗದವರ ಬಗ್ಗೆ ಮಾತನಾಡಿದ್ದು, ಬಿಜೆಪಿ ಶಾಸಕರು ಜನರಿಗೆ ಮಾಡಿರುವ ಅಪಮಾನ ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಸದಸ್ಯರ ಆಕ್ಷೇಪ ಸಚಿವ ಬೈರತಿ ಸುರೇಶ್ ಕರಾವಳಿ ಬಗ್ಗೆ ನೀಡಿದ ಹೇಳಿಕೆ ಕೋಲಾಹಲ ಸೃಷ್ಟಿಸಿತ್ತು. ಕರಾವಳಿಯಲ್ಲಿ ಬೆಂಕಿ ಹಾಕಿ ಇಲ್ಲೂ ಬೆಂಕಿ ಹಾಕ್ತಿದ್ದಾರೆಂಬ ಬೈರತಿ ಸುರೇಶ್ ಹೇಳಿಕೆ ಬೆಂಕಿಗೆ ತುಪ್ಪ ಸುರಿದಂತಾಯ್ತು. ಕರಾವಳಿ ಶಾಸಕರು ಕೆರಳಿ ಏಕಾಏಕಿ ಸದನದ ಬಾವಿಗಿಳಿದರು. ಇದರಿಂದ ವಿಪಕ್ಷಗಳ ಉಳಿದ ಸದಸ್ಯರಲ್ಲೂ ಗೊಂದಲ ಉಂಟಾಯಿತು. . ಕೊನೆಗೆ ಗದ್ದಲ ಹೆಚ್ಚಾಗಿ ಗೊಂದಲ, ಗದ್ದಲದ ನಡುವೆ ಸರ್ಕಾರ ವಿಧೇಯಕ ಅಂಗೀಕಾರಪಡೆದುಕೊಂಡಿತು. ಅಶೋಕ್ ಸೇರಿ ಅನೇಕರು ಮಸೂದೆ ಪ್ರತಿಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ವಿಧೇಯಕದ ಕುರಿತು, ಮತ್ತೆ ಸದನದಲ್ಲಿ ಪ್ರಶ್ನೆ ಮಾಡಿದ ಸಚಿವ ಭೈರತಿ ಸುರೇಶ್ “ಈ ವಿಧೇಯಕದಿಂದ ಯಾಕೆ ಇಷ್ಟೊಂದು ಭಯ ಪಡ್ತೀರಿ?” ಎಂದು ಬಿಜೆಪಿ ಸದಸ್ಯರನ್ನು ಪ್ರಶ್ನಿಸಿದರು. ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ, ಇದರಿಂದ ಪತ್ರಕರ್ತರು ನೆಮ್ಮದಿಯಾಗಿ ಇರಲಾಗದು” ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಪಕ್ಷ ನಾಯಕ ಆರ್ ಅಶೋಕ್ ಬಿಲ್ ಪ್ರತಿಯನ್ನು ಹರಿದು ಬಿಸಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು ಮುಂದೂಡಿದರು.
ಮೊದಲು ಮಸೂದೆಯ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ವಿವರಣೆ ನೀಡಿ, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಸಮಾಜಕ್ಕೆ ನೋವಾಗುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದರ ಪ್ರಮಾಣ ಜಾಸ್ತಿಯಾಗಿ ಕೊಲೆಗಳು, ಹೊಡೆದಾಟಗಳು ನಡೆದಿವೆ. ಇದನ್ನು ನಿಯಂತ್ರಣ ಮಾಡಬೇಕಾಗಿದೆ.ಸಾಮಾಜಿಕ, ರಾಜಕೀಯ ಸಭೆಗಳಲ್ಲಿ ಆಡುವ ದ್ವೇಷದ ಮಾತುಗಳು ಮತ್ತೊಂದು ಸಮುದಾಯದ ಮೇಲೆ ಪರಿಣಾಮ ಬೀರುತ್ತಿದೆ. ದ್ವೇಷ ಭಾಷಣದಲ್ಲಿ ಮತ್ತೊಂದು ಸಮುದಾಯದ ಬಗ್ಗೆ ಕೆಟ್ಟ ಮಾತುಗಳನ್ನು ಆಡಲಾಗಿದೆ. ದ್ವೇಷ ಭಾಷಣ ಮಾಡುವ ವ್ಯಕ್ತಿಗಳಿಗೆ ಎಷ್ಟು ದಿನ ನಿಬರ್ಂಧ ಹೇರಲು ಸಾಧ್ಯ? ಹೀಗಾಗಿ ಕಾನೂನು ತರಲಾಗಿದೆ ಎಂದು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ದ್ವೇಷ ಅಪರಾಧವನ್ನು ಎಸಗಿದ ವ್ಯಕ್ತಿಗೆ 1 ವರ್ಷಕ್ಕೆ ಕಡಿಮೆ ಇಲ್ಲದ 7 ವರ್ಷದವರೆಗೆ ವಿಧಿಸಬಹುದಾದ ಅವಧಿಯ ಸೆರೆಮನೆವಾಸದೊಂದಿಗೆ 50 ಸಾವಿರ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.
ಪುನರಾವರ್ತಿತ ಅಪರಾಧಗಳಿಗೆ 2 ವರ್ಷಗಳಿಗೆ ಕಡಿಮೆ ಇಲ್ಲದ 10 ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಕಾರಾಗೃಹ ವಾಸದೊಂದಿಗೆ 1 ಲಕ್ಷ ರೂ. ಜುಲಾನೆಯೊಂದಿಗೆ ದಂಡಿತವಾಗಬೇಕು. ಅಪರಾಧ ಪರಿಣಾಮದ ತೀವ್ರತೆಯ ಆಧಾರದ ಮೇಲೆ ದ್ವೇಷ ಅಪರಾಧದಿಂದಾಗಿ ಸಂತ್ರಸ್ತನಿಗೆ ಉಂಟಾದ ಹಾನಿಯನ್ನು ಲೆಕ್ಕ ಹಾಕುವ ಮೂಲಕ ನ್ಯಾಯಾಲಯವು ಆ ವ್ಯಕ್ತಿಗೆ ತಕ್ಕಷ್ಟು ಪರಿಹಾರವನ್ನು ನೀಡಬಹುದಾಗಿದೆ. ದ್ವೇಷ ಅಪರಾಧಗಳು ಜಾಮೀನು ರಹಿತವಾಗಿರುತ್ತದೆ. ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೆಟ್ ಮೂಲಕ ವಿಚಾರಣೆಗೆ ಒಳಪಡುತ್ತವೆ. ಈಗಾಗಲೇ ಮುದ್ರಿತವಾಗಿರುವ ಗ್ರಂಥದಲ್ಲಿ ದ್ವೇಷದ ಮಾತುಗಳಿದ್ದರೆ ಅಂಥವುಗಳನ್ನು ಸಹ ನಿಷೇಧಿಸಲಾಗುವುದು ಎಂದು ಹೇಳಿದರು.
ಈಗಾಗಲೇ ಮುದ್ರಿತವಾಗಿರುವ ಪುಸ್ತಕ, ಗ್ರಂಥದಲ್ಲಿ ದ್ವೇಷದ ಮಾತುಗಳು ಇವೆ ಎಂದಾದರೆ ಏನು ಕ್ರಮ? ಎಂದು ಸುನೀಲ್ ಕುಮಾರ್ ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ಕೊಟ್ಟ ಪರಮೇಶ್ವರ್, ಹಳೆ ಪುಸ್ತಕದಲ್ಲಿ ಇಂತಹ ಅಂಶ ಇದ್ದರೂ ಅದು ಕೂಡಾ ಈ ಕಾನೂನಿನ ವ್ಯಾಪ್ತಿಯಲ್ಲಿ ಬರಲಿದೆ. ಅಂತಹವನ್ನು ಬ್ಯಾನ್ ಮಾಡುವ ಪ್ರಕ್ರಿಯೆಗೆ ಅವಕಾಶ ಇದೆ.ವಿಧೇಯಕ ಮೇಲೆ ಮಾತಾಡಿದ ಆರ್ ಅಶೋಕ್, ರಾಜಕೀಯ ದ್ವೇಷ ತೀರಿಸಿಕೊಳ್ಳಲು ಇದನ್ನು ಬಳಕೆ ಮಾಡುವಂತಹ ಅವಕಾಶ ಸಿಕ್ಕಂತಾಗಿದೆ. ಪೆÇಲೀಸರು ಹಿಟ್ಲರ್ ಆಗಲು ಅವಕಾಶ ಇದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಲಿದೆ. ಭ್ರಷ್ಟಾಚಾರದಂತಹ ಗಂಭೀರ ಆರೋಪ ಸುದ್ದಿ ಮಾಡಿದರೆ ಮಾಧ್ಯಮದ ಪ್ರತಿನಿಧಿಗಳು ಮೊದಲೇ ಜಾಮೀನು ಪಡೆಯುವಂತಹ ಸ್ಥಿತಿ ಇದೆ. ಇದು ಪ್ರಜಾಪ್ರಭುತ್ವ ವಿರೋಧಿ, ಅಭಿವ್ಯಕ್ತಿ ಸ್ವಾತಂತ್ರ್ಯ ವಿರೋಧಿ ಎಂದು ಆತಂಕ ವ್ಯಕ್ತಪಡಿಸಿದರು.
ದ್ವೇಷಭಾಷಣ ಎಂಬುದು ಯಾವುದೇ ಪೂರ್ವಕಲ್ಪಿತ ಹಿತಾಸಕ್ತಿಯನ್ನು ಸಾಧಿಸಲು ಬದುಕಿರುವ ವ್ಯಕ್ತಿ ಅಥವಾ ಮೃತವ್ಯಕ್ತಿಗಳ ವರ್ಗ ಅಥವಾ ಗುಂಪು ಅಥವಾ ಸಮುದಾಯದ ವಿರುದ್ಧ ಹಾನಿ, ಅಸಾಮರಸ್ಯ ಅಥವಾ ವೈರತ್ವದ ಅಥವಾ ದ್ವೆ?ಷದ ಅಥವಾ ಕೆಡುಕಿನ ಭಾವನೆಗಳನ್ನು ಮೂಡಿಸುವ ಉದ್ದೇಶದೊಂದಿಗೆ ಸಾರ್ವಜನಿಕ ನೋಟದಲ್ಲಿ ಮೌಖಿಕವಾಗಿ ಅಥವಾ ಲಿಖಿತ ರೂಪದ ಪದಗಳಲ್ಲಿ ಅಥವಾ ಸಂಕೇತದ ಮೂಲಕ ಅಥವಾ ದೃಶ್ಯ ರೂಪಗಳ ಮೂಲಕ ಅಥವಾ ವಿದ್ಯುನಾನ ಸಂವಹನಗಳ ಮೂಲಕ ಅಥವಾ ಇನ್ಯಾವುದೇ ರೀತಿಯಲ್ಲಿ ಪ್ರಕಟಿಸಲಾದ, ಪರಿಚಯಿಸಲಾದ ಯಾವುದೇ ಅಭಿವ್ಯಕ್ತಿಗಳನ್ನು ಒಳಗೊಳ್ಳಲಿದೆ.
ಈ ವಿಧೇಯಕದಿಂದ ಪತ್ರಿಕಾ ರಂಗಕ್ಕೆ ತೊಂದರೆಯಾಗಲಿದೆ. ವಿರೋಧಪಕ್ಷಗಳನ್ನು ಗುರಿಯಾಗಿಸಿಕೊಂಡು ವಿಧೇಯಕ ತರಲಾಗಿದೆ. ಆಡಳಿತ ನಡೆಸುವವರಿಗೆ ಇದು ಅಸ್ತ್ರವಾಗಲಿದೆ. ಕಾನೂನು ತರುವ ಮುನ್ನ ಯೋಚನೆ ಮಾಡಬೇಕು. ಈಗಿರುವ ಕಾನೂನಿನಲ್ಲೆ ಜೈಲಿಗೆ ಹೋಗುತ್ತಿದ್ದಾರೆ. ಇದು ಕಾಯ್ದೆಯಾಗಿ ಜಾರಿಯಾದರೆ ಹೊಸ ಜೈಲುಗಳನ್ನು ಕಟ್ಟಬೇಕು. ಈಗಿರುವ ಜೈಲುಗಳು ಸಾಲುವುದಿಲ್ಲ. ಈಗಾಗಲೇ ಜೈಲುಗಳು ರೆಸಾರ್ಟ್ ರೀತಿ ಆಗಿವೆ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆಯಲ್ಲಿ ಶೇ. 50 ರಷ್ಟು ಸಿಬ್ಬಂದಿ ಭರ್ತಿಯಾಗಿಲ್ಲ. ಹೀಗಿರುವಾಗ ನಾಟಕ ನಡೆಯುವ ಕಡೆ, ಭಾಷಣ ಮಾಡುವ ಕಡೆ ಪೆÇಲೀಸರು ಭಾಷಣ ಬರೆದುಕೊಂಡು ಬರಬೇಕಾಗುತ್ತದೆ. ಈ ವಿಧೇಯಕ ನಿಮಗೇ ತಿರುಗುಬಾಣವಾಗುತ್ತದೆ ಎಂದು ಟೀಕಿಸಿದರು.
ಈ ವಿಧೇಯಕದ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆದು ಸದನ ಗೊಂದಲದ ಗೂಡಾಯಿತಲ್ಲದೆ ವಿಧೇಯಕವನ್ನು ವಿರೋಧಿಸಿ ಪ್ರತಿಪಕ್ಷಗಳ ಶಾಸಕರು ಸಭಾಧ್ಯಕ್ಷ ಯು.ಟಿ.ಖಾದರ್‍ರವರ ಪೀಠದ ಮುಂದಿನ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ಏನಿದು ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ?
1. ದ್ವೇಷ ಹುಟ್ಟಿಸುವುದು,
2. ಶತ್ರುತ್ವ ಪ್ರಚೋದಿಸುವುದು,
3. ಹಿಂಸೆಯನ್ನು ಪ್ರೇರೇಪಿಸುವುದು,
4. ಸಮುದಾಯಗಳ ನಡುವಿನ ವೈಷಮ್ಯ ಹೆಚ್ಚಿಸುವುದು
5 ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಟ 1 ವರ್ಷ, ಗರಿಷ್ಟ 7 ವರ್ಷದವರೆಗೆ ಜೈಲು, 50 ಸಾವಿರ ರೂ ದಂಡ.
6 ಅಪರಾಧ ಪುನರಾವರ್ತನೆಯಾದರೆ ಕನಿಷ್ಟ 2 ವರ್ಷದಿಂದ ಗರಿಷ್ಠ 7 ವರ್ಷದ ವರೆಗೆ ಜೈಲು ಶಿಕ್ಷೆ, 1 ಲಕ್ಷ ರೂ ದಂಡ
7 ದ್ವೇಷ ಭಾಷಣ ಮಾಡಿ ಕೇಸ್ ಬಿದ್ದರೆ ಅದು ಜಾಮೀನು ರಹಿತ ಪ್ರಕರಣವಾಗಲಿದೆ.
8 ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರ ಮೂಲಕ ದ್ವೇಷ ಭಾಷಣಗಳ ವಿಚಾರಣೆಗೆ ಅವಕಾಶ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


