ಶಬರಿಮಲೆ ಸೀಸನ್ ಆರಂಭವಾಗಿದ್ದು, ಮಾಲೆ ಹರಕೆ ಹೊತ್ತ ಭಕ್ತರು ಕೇರಳದತ್ತ ಮುಖ ಮಾಡಿದ್ದಾರೆ. ಭಾನುವಾರದಿಂದ ಮಂಡಲ ಪೂಜೆ ಆರಂಭವಾಗಿದ್ದು, ಭಕ್ತರ ದಂಡೇ ದೇವಾಲಯದತ್ತ ಹರಿದುಬರುತ್ತಿದೆ.
ಇನ್ನು ಪ್ರತಿ ವರ್ಷದ ಹಾಗೆ ಈ ವರ್ಷವೂ ಸಹ ಶಬರಿಮಲೆಯಲ್ಲಿ ನೂಕುನುಗ್ಗಲು ಉಂಟಾಗಿದೆ. ದೇವಸ್ಥಾನ ತೆರೆದು ಒಂದು ವಾರ ಕಳೆಯುವಷ್ಟರಲ್ಲಿಯೇ ಆಗಮಿಸಿದ ಭಕ್ತರು ಭಯಭೀತರಾಗುವಷ್ಟು ಜನಸ್ತೋಮ ಕಣ್ಣಾಯಿಸಿದಷ್ಟು ದೂರು ಕಾಣಸಿಗುತ್ತಿದೆ.
ಇದಕ್ಕೆ ಕೇರಳ ಸರ್ಕಾರದ ವಿರುದ್ಧ ಭಕ್ತರು ಕಿಡಿಕಾರಿದ್ದು, ಸರಿಯಾದ ಮೂಲಭೂತ ಸೌಕರ್ಯವಿಲ್ಲ, ವ್ಯವಸ್ಥೆಯಿಲ್ಲ, ಸಿಬ್ಬಂದಿ ವರ್ಗದ ಕೊರತೆ ಇದೆ ಎಂದೆಲ್ಲ ದೂರುಗಳು ಕೇಳಿಬರುತ್ತಿವೆ.
ಈ ಕುರಿತು ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಸಹ ತಾವು ಭೇಟಿ ನೀಡಿದ್ದ ಸಂದರ್ಭದ ಫೋಟೊ ಹಾಗೂ ವಿಡಿಯೊಗಳನ್ನು ಹಂಚಿಕೊಂಡು ಅವ್ಯವಸ್ಥೆಯ ಕುರಿತು ದೂರಿದ್ದರು.
ಇದೀಗ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತೆಲುಗು ಭಕ್ತನೋರ್ವ ಅಲ್ಲಿನ ವ್ಯವಸ್ಥೆ ಕಂಡು ಕಿಡಿಕಾರಿದ್ದಾರೆ. ಈ ಕುರಿತು ವಿಡಿಯೊ ಮಾಡಿರುವ ಇವರು ಕೇರಳ ಸರ್ಕಾರ ಏನೆಂದರೆ ಏನೂ ವ್ಯವಸ್ಥೆ ಮಾಡಿಲ್ಲ, ಬೇಕಾಬಿಟ್ಟಿ ನಿಯಮಗಳನ್ನು ಮಾಡಿದೆ, ಇದೇ ದೇವಾಲಯವೇನಾದರೂ ಪಾಕಿಸ್ತಾನವೋ ಅಥವಾ ಬೇರೆ ದೇಶದಲ್ಲೋ ಇದ್ದು ಆದಾಯ ಬರುತ್ತದೆ ಎಂದಿದ್ದರೆ ಇದಕ್ಕಿಂತ ಚೆನ್ನಾಗಿ ದೇವಾಲಯವನ್ನು ಇಟ್ಟುಕೊಳ್ಳುತ್ತಿದ್ದರು ಎಂದು ಕಿಡಿಕಾರಿದ್ದಾರೆ.
ಇಲ್ಲಿ ಭಕ್ತರಿಗೆ ಬೆಲೆಯೇ ಇಲ್ಲ, ಮಕ್ಕಳು ಅಥವಾ ವಯಸ್ಸಾದವರ ಬಗ್ಗೆಯಂತೂ ಸ್ವಲ್ಪವೂ ಕಾಳಜಿ ಇಲ್ಲ, ನಿಜಕ್ಕೂ ಇದನ್ನು ನೋಡಿದರೆ ಈ ದೇವಾಲಯ ಹಿಂದೂ ರಾಷ್ಟ್ರದಲ್ಲಿದೆಯಾ ಅಥವಾ ಮುಸ್ಲಿಂ, ಕ್ರೈಸ್ತ ದೇಶಗಳಲ್ಲಿದೆಯಾ ಎಂಬ ಪ್ರಶ್ನೆ ಮೂಡುತ್ತದೆ ಎಂದಿರುವ ಅವರು ಸದ್ಯದ ಪರಿಸ್ಥಿತಿಗೆ ತಕ್ಕಂತೆ ದೇವಾಲಯದ ಕಡೆ ಹೊರಟಿರುವ ಭಕ್ತರು ಯಾರೂ ಸಹ ಬರಲು ಹೋಗಬೇಡಿ, ಒಂದೆರಡು ದಿನಗಳ ಕಾಲ ಎಲ್ಲಾದರೂ ಇದ್ದು ತದನಂತರ ದೇವಾಲಯದ ಕಡೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಆಂಧ್ರ ಪ್ರದೇಶದಿಂದ ಇಲ್ಲಿಗೆ ಹೆಚ್ಚು ಮಟ್ಟದಲ್ಲಿ ಭಕ್ತರು ಬರುತ್ತಿದ್ದು, ಆಂಧ್ರ ಪ್ರದೇಶ ಸರ್ಕಾರ ಈ ಕುರಿತು ತುಸು ಕ್ರಮಗಳನ್ನು ತೆಗೆದುಕೊಳ್ಳಬೇಕು, ಕೇರಳ ಸರ್ಕಾರದ ಜತೆ ಈ ಬಗ್ಗೆ ಚರ್ಚಿಸಬೇಕು ಎಂದು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್‌ಗೆ ಮನವಿ ಮಾಡಿಕೊಂಡಿದ್ದಾರೆ. ದೇವಸ್ಥಾನದ ವ್ಯವಸ್ಥೆ ಹೇಗಿದೆ ಎಂದರೆ ಇನ್ನೆಂದೂ ಮಾಲೆಯನ್ನೇ ಹಾಕಬಾರದು ಎನಿಸಿಬಿಡಬೇಕು ಎನಿಸುವಷ್ಟು ಕೆಟ್ಟದಾಗಿದೆ ಎಂದು ಕಿಡಿಕಾರಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


