Monday, November 2, 2026
spot_img
More
    spot_img
    HomeLatest news2.5 ವರ್ಷದ ಅಧಿಕಾರ ಹಂಚಿಕೆ ಸೂತ್ರ ಕೇಳಿ ಕಾಂಗ್ರೆಸ್‌ ಬೆಚ್ಚಿ ಬೀಳುವುದು ಏಕೆ?, ಆಸಕ್ತಿಕರ ಅಂಶಗಳು

    2.5 ವರ್ಷದ ಅಧಿಕಾರ ಹಂಚಿಕೆ ಸೂತ್ರ ಕೇಳಿ ಕಾಂಗ್ರೆಸ್‌ ಬೆಚ್ಚಿ ಬೀಳುವುದು ಏಕೆ?, ಆಸಕ್ತಿಕರ ಅಂಶಗಳು

    ಕರ್ನಾಟಕದ ಕಾಂಗ್ರೆಸ್ ಸರ್ಕಾರ 2.5 ವರ್ಷಗಳನ್ನು ನವೆಂಬರ್ 20ಕ್ಕೆ ಪೂರ್ಣಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಬಿಟ್ಟುಕೊಡಬೇಕು ಎಂಬುದು ಚರ್ಚೆಯ ವಿಚಾರ.

    ಡಿ.ಕೆ.ಶಿವಕುಮಾರ್ ಬೆಂಬಲಿಗರು ದೆಹಲಿಯಲ್ಲಿ ಈ ಕುರಿತು ವರಿಷ್ಠರನ್ನು ಭೇಟಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಯಾವುದೇ ನಾಯಕರ ಮನೆಯಲ್ಲಿ ಸಭೆ, ಭೋಜನಕೂಟ ನಡೆದರೂ ಈಗ ರಾಜಕೀಯ ಚರ್ಚೆ ಎಂದೇ ಬಿಂಬಿತವಾಗುತ್ತಿದೆ. ನಾಯಕತ್ವ ಬದಲಾವಣೆ ಅಷ್ಟು ಸುಲಭದ ಮಾತಲ್ಲ ಎಂಬುದು ರಾಜ್ಯದ ಎಲ್ಲರಿಗೂ ತಿಳಿದ ವಿಚಾರವಾಗಿದೆ.

    ಆದರೆ ಕಾಂಗ್ರೆಸ್ ಪಕ್ಷದಲ್ಲಿ 2.5 ವರ್ಷದ ಅಧಿಕಾರ ಹಂಚಿಕೆ ಸೂತ್ರ ಸುಲಭವಲ್ಲ. ಇದು ಕೇವಲ ಕರ್ನಾಟಕದ ಮಾತಲ್ಲ. ರಾಷ್ಟ್ರಮಟ್ಟದಲ್ಲಿ ಈ ಸೂತ್ರ ಜಾರಿಗೊಳಿಸಲು ಹೋಗಿ ಪಕ್ಷ ಎಡವಿ ಬಿದ್ದಿದೆ, ಅಧಿಕಾರವನ್ನೇ ಕಳೆದುಕೊಂಡ ಉದಾಹರಣೆ ಇದೆ.

    ಆದ್ದರಿಂದ ಸ್ಪಷ್ಟ ಬಹುಮತ ಇರುವ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸೂತ್ರ ಜಾರಿಗೆ ತರಲು ಕಾಂಗ್ರೆಸ್ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ನಾಯಕತ್ವ ಬದಲಾವಣೆ ಮಾಡಿದರೆ 2028ರ ಚುನಾವಣೆ ಮೇಲೆ ಆಗುವ ಪರಿಣಾಮದ ಕುರಿತು ಆಲೋಚನೆ ಮಾಡುತ್ತಿದೆ.

    ಛತ್ತೀಸ್‌ಗಢ ಕಲಿಸಿದ ಪಾಠ: 2.5 ವರ್ಷದ ಅಧಿಕಾರ ಹಂಚಿಕೆ ಸೂತ್ರದಲ್ಲಿ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷ ಸರಿಯಾಗಿ ಪಾಠವನ್ನು ಕಲಿತಿದೆ. 2013ರಲ್ಲಿ ರಾಜ್ಯದಲ್ಲಿ ಬಿಜೆಪಿ 49, ಕಾಂಗ್ರೆಸ್ 39, ಬಿಎಸ್‌ಪಿ 1 ಮತ್ತು ಇತರರು 1 ಸೇರಿ ಬಿಜೆಪಿ ಸರ್ಕಾರ ರಚನೆಗೊಂಡಿತ್ತು.

    2018ರಲ್ಲಿ ಕಾಂಗ್ರೆಸ್ 68, ಬಿಜೆಪಿ 15, ಜೆಸಿಸಿ(ಜೆ) 5 ಮತ್ತು ಬಿಎಸ್‌ಪಿ 2 ಸೀಟು ಗೆಲ್ಲುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿ ಡಿಸೆಂಬರ್ 17, 2018ರಲ್ಲಿ ಭೂಪೇಶ್ ಬಾಘೇಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.

    ಪಕ್ಷದ ಇಬ್ಬರು ಹಿರಿಯ ನಾಯಕರಾದ ಟಿಎಸ್ ಸಿಂಗ್ ದೇವ್ ಮತ್ತು ತಾಮ್ರಧ್ವಜ ಸಾಹು ಭೂಪೇಶ್ ಬಾಘೇಲ್ ಸಂಪುಟ ಸೇರಿದರು. ಆದರೆ ರಾಜ್ಯದಲ್ಲಿ 2.5 ವರ್ಷದ ಅಧಿಕಾರ ಹಂಚಿಕೆ ಸೂತ್ರವಾಗಿದೆ ಎಂಬ ಸುದ್ದಿ ಪ್ರಮಾಣ ವಚನ ಸಮಾರಂಭದ ದಿನದಿಂದಲೇ ಹಬ್ಬಿತು.

    ಟಿಎಸ್ ಸಿಂಗ್ ದೇವ್ ಹಲವಾರು ಬಾರಿ ಹೈಕಮಾಂಡ್ ನಾಯಕರು ನನಗೆ ಭರವಸೆ ಕೊಟ್ಟಿದ್ದಾರೆ. 2.5 ವರ್ಷದ ಬಳಿಕ ಅಧಿಕಾರ ಹಂಚಿಕೆಯಾಗಲಿದೆ ಎಂದು ಹೇಳುತ್ತಲೇ ಬಂದರು. ಆದರೆ ಈ ಹೇಳಿಕೆಗಳೇ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ತೊಂದರೆ ಉಂಟು ಮಾಡಿತು.

    ಹೈಕಮಾಂಡ್ ಮಟ್ಟದಲ್ಲಿ ಏನು ಮಾತುಕತೆ ನಡೆದಿತ್ತು? ಎಂಬುದು ಈಗ ಕರ್ನಾಟಕದ ಮಾದರಿಯಲ್ಲಿ ಆಗ ರಹಸ್ಯವಾಗಿಯೇ ಉಳಿದಿತ್ತು. ಆದರೆ ಹಿರಿಯ ಕಾಂಗ್ರೆಸ್ ನಾಯಕ ಟಿಎಸ್ ಸಿಂಗ್ ದೇವ್ ಹೇಳಿಕೆ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿತು.

    2023ರ ವಿಧಾನಸಭೆ ಚುನಾವಣೆ ಪೂರ್ವ ಸಮೀಕ್ಷೆಗಳು ಈ ಅಧಿಕಾರ ಹಂಚಿಕೆ ಗೊಂದಲ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಲಿದೆ ಎಂದು ಅಂದಾಜಿಸಿತು. ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಳ್ಳಲಿದೆ ಎಂದು ವರದಿಗಳು ಬಂದವು.

    ಅದು ಹಾಗೆಯೇ ಆಯಿತು. ರಾಜ್ಯದಲ್ಲಿ 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಬಿಜೆಪಿ 54, ಕಾಂಗ್ರೆಸ್ 35, ಜಿಪಿಪಿ 1 ಸೀಟುಗಳಲ್ಲಿ ಜಯಗಳಿಸಿತು. ಅಧಿಕಾರ ‘ಕೈ’ ತಪ್ಪಿತು.

    ಕರ್ನಾಟಕದಲ್ಲಿ ಈಗ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ರಾಜಕೀಯ ತಂತ್ರಗಾರಿಕೆ, ಜನ ಬೆಂಬಲ, ಶಾಸಕರ ಬೆಂಬಲದ ಕುರಿತು ಯಾವುದೇ ಅನುಮಾನಗಳಿಲ್ಲ. ಇದು ನಾಯಕತ್ವ ಬದಲಾವಣೆ ಅಷ್ಟು ಸುಲಭವಲ್ಲ ಎಂಬು ಸಾರಿ ಸಾರಿ ಹೇಳುತ್ತಿವೆ.

    ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಪಕ್ಷ ನಿಷ್ಠೆ, ಪಕ್ಷ ಕಟ್ಟುವ ಸಾಮರ್ಥ್ಯದ ವಿಚಾರದಲ್ಲಿಯೂ ಅನುಮಾನ ಬೇಡ. ಆದರೆ ಅಧಿಕಾರ ಹಂಚಿಕೆ ಸೂತ್ರ ಎಂದು ಬಂದಾಗ ಶಾಸಕರ ಬೆಂಬಲ, ಮುಂದಿನ ಚುನಾವಣೆಯ ಪರಿಣಾಮದ ಕುರಿತು ಆಲೋಚನೆ ನಡೆಸಿದರೆ ಡಿ.ಕೆ.ಶಿವಕುಮಾರ್‌ಗೆ ಅಧಿಕಾರ ಸಿಗುವುದೇ? ಎಂಬುದು ಸದ್ಯದ ಪ್ರಶ್ನೆಯಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search