ಇಂದಿನಿಂದ ( ನವೆಂಬರ್ 21 ) ವಿಶ್ವ ಕ್ರಿಕೆಟ್‌ನ ಅತಿ ರೋಚಕ ಕ್ರಿಕೆಟ್ ಸರಣಿಯಾದ ಆಶಸ್ ಟೆಸ್ಟ್ ಸರಣಿ ಆರಂಭಗೊಳ್ಳುತ್ತಿದೆ. ಈ ಸಲುವಾಗಿ ಕ್ರಿಕೆಟ್ ನೇರಪ್ರಸಾರ ಸಂಸ್ಥೆಗಳು ಮಾಜಿ ಕ್ರಿಕೆಟಿಗರನ್ನು ಕಾಮೆಂಟರಿ ಹೇಳಲು ನೇಮಿಸಿಕೊಂಡಿದ್ದು, ಕ್ರಿಕೆಟ್ ಇತಿಹಾಸದ ಅತ್ಯುತ್ತಮ ನಾಯಕ ರಿಕಿ ಪಾಂಟಿಂಗ್ ಸ್ಕೈ ಸ್ಪೋರ್ಟ್ಸ್‌ಗೆ ಆಯ್ಕೆಯಾಗಿದ್ದಾರೆ.
ಹೀಗೆ ಸ್ಕೈಸ್ಪೋರ್ಟ್ಸ್‌ನಲ್ಲಿ ಕಾಮೆಂಟರಿ ಹೇಳಲು ಬಂದ ಪಾಂಟಿಂಗ್‌ಗೆ ಚಾನೆಲ್‌ನವರು ಕ್ರಿಕೆಟ್ ಕುರಿತು ಕೆಲ ಪ್ರಶ್ನೆಗಳನ್ನು ಕೇಳಿದ್ದು, ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯವ ಆಟಗಾರರ ಪೈಕಿ ಯಾರು ಉತ್ತಮ ಎಂದೂ ಸಹ ಕೇಳಿದ್ದಾರೆ. ಇದಕ್ಕೆ ರಿಕಿ ಪಾಂಟಿಂಗ್ ಒಂದೊಂದು ಹೋಲಿಕೆಗೂ ಉತ್ತರ ನೀಡಿ ಪ್ರತಿಕ್ರಿಯಿಸಿದ್ದು, ಅಂತಿಮವಾಗಿ ಆಸ್ಟ್ರೇಲಿಯಾದ ಆಟಗಾರನನ್ನು ಲಾರಾ, ಸಚಿನ್ ಹಾಗೂ ಕೊಹ್ಲಿಗಿಂತಲೂ ಉತ್ತಮ ಎಂದು ಆರಿಸಿದ್ದಕ್ಕೆ ಟೀಕೆಗೆ ಒಳಗಾಗಿದ್ದಾರೆ.
ಹೌದು, ನಾಲ್ಕನೇ ಕ್ರಮಾಂಕದಲ್ಲಿ ಯಾರು ಉತ್ತಮ ಎಂಬ ಪ್ರಶ್ನೆಗೆ ಕೆವಿನ್ ಪೀಟರ್ಸನ್ ಹಾಗೂ ಮಹೇಲಾ ಜಯವರ್ಧನೆ ನಡುವೆ ಪೀಟರ್ಸನ್ ಅನ್ನು ಆರಿಸಿದ ಪಾಂಟಿಂಗ್ ಮಾರ್ಕ್ ವಾ ಆಯ್ಕೆಯನ್ನು ನೀಡಿದರೂ ಪೀಟರ್ಸನ್ ಎಂದರು. ಬಳಿಕ ಪೀಟರ್ಸನ್ ಮಿಯಾಂದಾದ್ ಇಬ್ಬರಲ್ಲಿ ಮಿಯಾಂದಾದ್ ಆರಿಸಿದ ಪಾಂಟಿಂಗ್ ಮಿಯಾಂದಾದ್ ಅಥವಾ ಸ್ಮಿತ್ ಎಂದಾಗ ಸ್ಮಿತ್ ಎಂದರು. ಅಲ್ಲದೇ ಸ್ಮಿತ್ ಅಥವಾ ಬ್ರಿಯಾನ್ ಲಾರಾ ಎಂದು ಆಯ್ಕೆ ನೀಡಿದಾಗ ಸ್ಮಿತ್ ಎಂದ ರಿಕಿ ಬಳಿಕ ಜಾಕ್ ಕಾಲೀಸ್, ವಿರಾಟ್ ಕೊಹ್ಲಿ, ಜೂ ರೂಟ್ ಹಾಗೂ ಕೊನೆಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಆಯ್ಕೆಯನ್ನಾಗಿ ನೀಡಿದಾಗಲೂ ಸ್ಟೀವ್ ಸ್ಮಿತ್‌ರನ್ನು ಆರಿಸಿದರು.
ಈ ಮೂಲಕ ಇವರೆಲ್ಲರಿಗಿಂತ ಸ್ಟೀವ್ ಸ್ಮಿತ್ ನಾಲ್ಕನೇ ಕ್ರಮಾಂಕದಲ್ಲಿ ಬೆಸ್ಟ್ ಎಂದರು. ಪಾಂಟಿಂಗ್‌ರ ಈ ಆಯ್ಕೆಗೆ ವಿರೋಧಗಳು ವ್ಯಕ್ತವಾಗಿವೆ. ದಂತಕತೆಗಳಾದ ಬ್ರಿಯಾನ್ ಲಾರಾ ಹಾಗೂ ಸಚಿನ್ ತೆಂಡೂಲ್ಕರ್‌ಗಿಂತ ಸ್ಟೀವ್ ಸ್ಮಿತ್ ಯಾವ ಆಯಾಮದಿಂದ ಬೆಸ್ಟ್ ಎಂದು ಪ್ರಶ್ನಿಸಿದ್ದಾರೆ. ಇನ್ನು ರಿಕಿ ಪಾಂಟಿಂಗ್ ಓರ್ವ ಆಸ್ಟ್ರೇಲಿಯಾ ಕ್ರಿಕೆಟಿಗ ಹಾಗೂ ಆಸ್ಟ್ರೇಲಿಯನ್ನರು ತಮ್ಮ ತಂಡವನ್ನು ಬಿಟ್ಟುಕೊಡುವುದಿಲ್ಲ. ಹೀಗಾಗಿ ಸ್ಮಿತ್‌ರನ್ನು ಆರಿಸಿರಬಹುದು ಎಂದೂ ಸಹ ಕೆಲವರು ಕಾಮೆಂಟ್ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


