ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಭೇಟಿಗೆ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಕ್ಷೇತ್ರ ಮೈಸೂರಿನಲ್ಲಿ ನಡೆಯಲಿರುವ ಅಹಿಂದ ಸಮಾವೇಶ ಅವರ ನಿದ್ದೆಗೆಡಿಸಿದೆ.
ಮಂಗಳವಾರವೇ ಡಿ.ಕೆ.ಶಿವಕುಮಾರ್ ದೆಹಲಿ ತಲುಪಿದ್ದಾರೆ. ಅವರು ಬುಧವಾರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಪ್ರಯತ್ನ ನಡೆಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಗಾಗಿ ಕಾಯುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಸಿ ಮೈಸೂರಿನಲ್ಲಿ ನಡೆಯಲಿರುವ ಅಹಿಂದ ಸಮಾವೇಶ ತಡೆಯುವುದು ಅವರ ಏಕೈಕ ಉದ್ದೇಶವಾಗಿದೆ. ಅಹಿಂದ ಸಮಾವೇಶದ ಪೂರ್ವಭಾವಿ ಸಭೆ ಇಂದು ನಡೆಯುತ್ತಿದೆ. ಆದರೆ ಸಮಾವೇಶದ ದಿನಾಂಕ, ಸ್ಥಳ ಇನ್ನೂ ಅಂತಿಮವಾಗಿಲ್ಲ.
ಏನಿದು ಸಮಾವೇಶ?; ಅಹಿಂದ, ಮೈಸೂರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ (ರಿ.) ಹೆಸರಿನಲ್ಲಿ ಪ್ರಕಟಣೆಯೊಂದನ್ನು ನೀಡಲಾಗಿದೆ. ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರನ್ನು ಬೆಂಬಿಸಿ ಅಹಿಂದ ಸಮಾವೇಶದ ಪೂರ್ವ ಸಿದ್ಧತಾ ಸಭೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.
‘ಶ್ರೀ ಸಿದ್ದರಾಮಯ್ಯ ಇವತ್ತಿನ ಅನಿವಾರ್ಯ’ ದಿನಾಂಕ 24/12/2025 ಬುಧವಾರ ಬೆಳಗ್ಗೆ 11.30ಕ್ಕೆ ಸಭೆ. ಹೋಟೆಲ್ ಗುರು ರೆಸಿಡೆನ್ಸಿ, ಜೆ.ಎಲ್.ಬಿ.ರಸ್ತೆ, ಮೈಸೂರು ಇಲ್ಲಿ ಈ ಸಭೆ ನಡೆಯಲಿದೆ. ಅಹಿಂದ ಸಮಾವೇಶದ ದಿನಾಂಕವನ್ನು ಸಹ ಈ ಸಭೆಯಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇದೆ.
ಈಗಾಗಲೇ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿರುವಾಗ ಸಿದ್ದರಾಮಯ್ಯ ಬೆಂಬಲಿಸಿ ‘ಅಹಿಂದ ಸಮಾವೇಶ’ ನಡೆದರೆ ಸಿದ್ದರಾಮಯ್ಯ ಬೆಂಬಲ ಇನ್ನಷ್ಟು ಹೆಚ್ಚಾಗಲಿದೆ. ಆದ್ದರಿಂದ ಈ ಸಮಾವೇಶ ತಡೆಯಲು ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ರಣತಂತ್ರ ರೂಪಿಸುತ್ತಿದ್ದಾರೆ.
ಹೈಕಮಾಂಡ್ ಮೂಲಕವೇ ಅಹಿಂದ ಸಮಾವೇಶ ನಡೆಸದಂತೆ ಸಂದೇಶವನ್ನು ಕೊಡಿಸುವುದು ಡಿ.ಕೆ.ಶಿವಕುಮಾರ್ ಚಿಂತನೆಯಾಗಿದೆ. ಆದ್ದರಿಂದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಅವರು ಪ್ರಯತ್ನವನ್ನು ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಭೇಟಿಯಾದ ರಾಜಣ್ಣ: ಮಾಜಿ ಸಚಿವ ಮತ್ತು ಸಿದ್ದರಾಮಯ್ಯ ಆತ್ಮೀಯರಾದ ಕೆ.ಎನ್.ರಾಜಣ್ಣ ಮಂಗಳವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಮಾಡಿ, ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮೊದಲು ಎರಡು ಬಾರಿ ಡಿ.ಕೆ.ಶಿವಕುಮಾರ್ ಕೆ.ಎನ್.ರಾಜಣ್ಣ ಭೇಟಿ ಮಾಡಿದ್ದರು. ಡಿ.ಕೆ.ಶಿವಕುಮಾರ್ ಮಂಗಳವಾರ ದೆಹಲಿಗೆ ತೆರಳುತ್ತಿದ್ದಂತೆಯೇ ರಾಜಣ್ಣ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ.
ನಾಯಕತ್ವ ಬದಲಾವಣೆ ಚರ್ಚೆಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ತೆರೆ ಬಿದ್ದಿಲ್ಲ. ಮೈಸೂರಿನಲ್ಲಿ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, “ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂಬ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ನನ್ನ ಪೂರ್ಣ ಸಹಮತವಿದೆ. ಯಾರು ಪಕ್ಷಕ್ಕಿಂತ ದೊಡ್ಡವರಾಗಲು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು.
“ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿಯವರು ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ. ನಾನು ಈ ಬಗ್ಗೆ ಪಕ್ಷದ ವರಿಷ್ಠರ ಬಳಿ ಮಾತನಾಡಿದ್ದು, ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ” ಎಂದು ತಿಳಿಸಿದ್ದರು.
“ಮಾಧ್ಯಮದವರೇ ನಾಯಕತ್ವ ಬದಲಾವಣೆಯ ಬಗ್ಗೆ ಹೆಚ್ಚಾಗಿ ಚರ್ಚಿಸುತ್ತಿದ್ದಾರೆ. ಇಷ್ಟೊಂದು ಪ್ರಶ್ನೆ ಕೇಳಬೇಕಾದ ಅಗತ್ಯ ಏನಿದೆ? ವಿಧಾನಸಭೆಯಲ್ಲಿ ಈ ಬಗ್ಗೆ ಹೇಳಿದ ಮೇಲೂ ಪುನಃ ಚರ್ಚೆ ಮಾಡುವ ಅಗತ್ಯವೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದರು.
ಅಹಿಂದ ಮೂಲಕವೇ ಸಿದ್ದರಾಮಯ್ಯ ರಾಜ್ಯ ರಾಜಕೀಯದಲ್ಲಿ ಪ್ರಬಲವಾಗಿ ಬೆಳೆದು ನಿಂತಿದ್ದಾರೆ. ಈಗಲೂ ಅಹಿಂದ ವರ್ಗದ ಪ್ರಭಾವಿ ನಾಯಕ ಸಿದ್ದರಾಮಯ್ಯ, ನಾಯಕತ್ವ ಬದಲಾವಣೆ ವಿಚಾರ ಭಾರೀ ಚರ್ಚೆಯಾಗುವ ಸಂದರ್ಭದಲ್ಲಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಅಹಿಂದ ಸಮಾವೇಶ ನಡೆದರೆ ಚಿತ್ರಣವೇ ಬದಲಾಗಲಿದೆ ಎಂಬುದು ಡಿ.ಕೆ.ಶಿವಕುಮಾರ್‌ಗೆ ತಿಳಿದಿದೆ. ಆದ್ದರಿಂದ ಸಮಾವೇಶವನ್ನು ತಡೆಯಲು ಅವರು ದೆಹಲಿಯಿಂದಲೇ ಪ್ರಯತ್ನ ಮಾಡುತ್ತಿದ್ದಾರೆ.


