ಏಪ್ರಿಲ್ 22ರಂದು ನಡೆದ ಜಮ್ಮು ಕಾಶ್ಮೀರದ ಬೈಸರನ್ ವ್ಯಾಲಿಯ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ನರಮೇಧ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಉಗ್ರರ ದಾಳಿಯಲ್ಲಿ ಓರ್ವ ಸ್ಥಳೀಯ ಸೇರಿದಂತೆ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದರು.
ಈ ಬೀಭತ್ಸ ಕೃತ್ಯದಲ್ಲಿ ಪಾಕ್ ಕೈವಾಡವಿದೆ ಎಂದು ಭಾರತ ವಾದಿಸಿದ್ದು, ಪಾಕ್ ಇದಕ್ಕೂ ತನಗೂ ಸಂಬಂಧವಿಲ್ಲ ಎಂದಿದೆ. ಸದ್ಯ ಎರಡೂ ದೇಶಗಳ ನಡುವಿನ ಸಂಪರ್ಕವನ್ನು ಕಡಿದುಕೊಳ್ಳಲು ಭಾರತ ನಿರ್ಧರಿಸಿದ್ದು, ಪಾಕ್ ಕ್ಷಿಪಣಿ ಪರೀಕ್ಷೆ ನಡೆಸಿ ಭಾರತಕ್ಕೆ ಟಾಂಗ್ ಕೊಟ್ಟಿತ್ತು.
ಇದು ರಾಷ್ಟ್ರಗಳ ನಡುವಿನ ಸಂಘರ್ಷವಾದರೆ, ರಾಷ್ಟ್ರದೊಳಗೆ ಈ ದಾಳಿಗೆ ಕೋಮು ಬಣ್ಣ ಬಳಿದು ಕಿತ್ತಾಡುತ್ತಿದ್ದಾರೆ. ಇದಕ್ಕೆ ಕಾರಣ ಘಟನೆಯ ವೇಳೆ ಉಗ್ರರು ಹಿಂದೂ ಧರ್ಮದವರನ್ನು ಹುಡುಕಿ ಕೊಂದರು ಎಂದು ಕೇಳಿಬಂದ ಸುದ್ದಿ. ಈ ತರಹದ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಹಾಗೂ ಮುಸ್ಲಿಂ ನಡುವೆ ಪರಸ್ಪರ ಟೀಕೆಗಳು ನಡೆದವು. ಅಲ್ಲದೇ ದೇಶದಲ್ಲಿನ ಮುಸ್ಲಿಮರ ವಿರುದ್ಧ ಭಾರೀ ಟೀಕೆಗಳು ಎದುರಾಗಿದ್ದವು.
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲ ಹೆಚ್ಚಾಗುತ್ತಿದ್ದಂತೆ ತೆಲುಗು ನಟಿ ಕಾಜಲ್ ಅಗರ್ವಾಲ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಯಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿ ಹಿಂದೂ vs ಮುಸ್ಲಿಂ ಅಲ್ಲ. ಉಗ್ರಗಾಮಿಗಳು vs ಮಾನವೀಯತೆಯ ನಡುವಿನ ಸಂಘರ್ಷ ಎಂದಿದ್ದಾರೆ. ಅಲ್ಲದೇ ವಿರೋಧಿಗಳಿಗೆ ಬೇಕಾಗಿರೋದು ಸಹ ಅದೇ ಎಂದಿದ್ದಾರೆ. ನಾವು ಅಂತಹವುಗಳನ್ನು ಕೇಳಿ ಬೇರೆಯಾಗುವುದು ಬೇಡ. ಬೇರ್ಪಡುವುದರಿಂದ ಭಯ ಹೆಚ್ಚಾಗುತ್ತದೆಯೋ ಹೊರತು ಸಮಸ್ಯೆ ಸರಿಹೋಗಲ್ಲ ಜಾಗೃತರಾಗಿರಿ ಎಂದಿದ್ದಾರೆ.
ಈ ಮೂಲಕ ಕಾಜಲ್ ಹಿಂದೂ ಹಾಗೂ ಮುಸ್ಲಿಮರು ಈ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಇರಬೇಕು ಎಂದು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


