ಇತ್ತೀಚಿನ ವರ್ಷಗಳಲ್ಲಿ ಸೂಪರ್‌ಸ್ಟಾರ್‌ಗಳು ತಮ್ಮ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಣೆ ಮಾಡಿಕೊಳ್ಳುವ ಸಂಭ್ರಮಗಳೇ ದೂರವಾಗುತ್ತಿರುವ ಸಂದರ್ಭದಲ್ಲಿ ಕಿಚ್ಚ ಸುದೀಪ್ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ಸೆಪ್ಟೆಂಬರ್ 2 ರಂದು ತಮ್ಮ 52ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು ಈ ಕುರಿತು ಅಭಿಮಾನಿಗಳಿಗೆ ಕಿಚ್ಚ ಸಂದೇಶ ನೀಡಿದ್ದಾರೆ.
‘ಸೆಪ್ಟೆಂಬರ್ ಎರಡರ ಬೆಳಗಿನಲ್ಲಿ ಅಲ್ಲ ಸೆಪ್ಟೆಂಬರ್ ಒಂದರ ರಾತ್ರಿಯೇ ಸಿಗೋಣವಾ? ಸೆಪ್ಟೆಂಬರ್ ಎರಡರಂದು ನೀವು ನನ್ನನ್ನು ಭೇಟಿಮಾಡುವುದಕ್ಕಾಗಿ ಎಷ್ಟು ಕಾಯುವಿರೋ ಅದಕ್ಕಿಂತ ಹೆಚ್ಚಾಗಿ ನಾನು ನಿಮಗಾಗಿ ಕಾಯುತ್ತೇನೆ. ಆ ದಿನ ನೀವು ಪಡುವ ಸಂಭ್ರಮ, ಆಚರಿಸುವ ವಿಡಿಯೋಗಳನ್ನು ನೋಡಿದಾಗ ಪ್ರತಿಸಲವೂ ನನಗೆ ಮರುಹುಟ್ಟು ಪಡೆದಂತಾಗುತ್ತದೆ. ನಿಸ್ಸಂದೇಹವಾಗಿ ನನ್ನ ಬದುಕಿಗೆ ಮೌಲ್ಯ ತುಂಬಿದವರು ನೀವು. ನಿಮ್ಮೆದರು ನಿಂತು ವಿನೀತನಾಗುವುದಕ್ಕಿಂತ ಖುಷಿ ಏನಿದೆ? ಆದ್ದರಿಂದಲೇ ದಶಕಗಳಿಂದ ನಿಮ್ಮನ್ನು ಮನೆಯ ಹತ್ತಿರ ಭೇಟಿಮಾಡುತ್ತಲೇ ನಾನೂ ಸಂಭ್ರಮಸಿದ್ದೇನೆ. ಆದರೆ ಈ ಸಲ ತುಂಬಾ ಕಷ್ಟವಾಗುತ್ತಿದೆ. ಏಕೆಂದರೆ ಅಮ್ಮನಿಲ್ಲದ ಮೊದಲ ವರ್ಷವಿದು. ಅಮ್ಮನಿಲ್ಲದ ಸಂಭ್ರಮವನ್ನು ಊಹಿಸಿಕೊಳ್ಳುವುದೂ ನನಗೆ ಕಷ್ಟವಾಗುತ್ತಿದೆ’
‘ಆದರೆ ನಿಮ್ಮನ್ನು ನಿರಾಸೆಗೊಳಿಸುವುದು ನನಗಿಷ್ಟವಿಲ್ಲ! ನಿಮ್ಮ ಮೂಲಕವೇ ನನ್ನ ಹುಟ್ದಬ್ಬ ಹುಟ್ಟಬೇಕು. ಗಡಿಯಾರ ಹನ್ನೆರಡು ಗಂಟೆ ಎಂದು ಸದ್ದುಮಾಡುವಾಗ ನನಗೆ ನಿಮ್ಮ ಶುಭಾಶಯಗ ಕಿವಿಗೆ ಕೇಳಬೇಕು. ಅವುಗಳೇ ಎದೆಗೆ ಇಳಿಯಬೇಕು. ಆದ್ದರಿಂದ ಸೆಪ್ಟೆಂಬರ್ ಒಂದರ ರಾತ್ರಿ ನಾವೆಲ್ಲರೂ ಒಂದು ಕಡೆ ಸೇರೋಣ. ಎಲ್ಲಿ, ಹೇಗೆ? ಅನ್ನೋದನ್ನು ತಿಳಿಸುತ್ತೇನೆ’ ಎಂದು ಸುದೀಪ್ ಹೇಳಿದ್ದಾರೆ.
ಆದರೆ ಮಾರನೇ ದಿನ ಅಂದರೆ ಸೆಪ್ಟೆಂಬರ್ 2ರಂದು ದಯವಿಟ್ಟು ಯಾರೂ ಮನೆ ಹತ್ತಿರ ಬರಬೇಡಿ. ನಾನು ಆ ದಿನ ಮನೆಯಲ್ಲಿ ಇರುವುದಿಲ್ಲ. ನಾನಿರುವುದಿಲ್ಲವೆಂದು ಹೇಳಿ ಮೇಲೂ ನೀವು ಮನೆ ಬಳಿ ಬಂದು ಕಾದರೆ ನಿನ್ನ ಮನಸಿಗೆ ನೋವಾಗುತ್ತದೆ. ಜೊತೆಗೆ ಈ ಸಲ ಅಮ್ಮನಿಲ್ಲದ ಮೊದಲ ವರ್ಷವಾಗಿರುವುದರಿಂದ ಮನೆ ಬಳಿ ಚೂರು ಶಾಂತಿ ವಾತಾವರಣ ಇರಲೆಂದು ಬಯಸುತ್ತಿದ್ದೇನೆ. ನನಗೆ ನಂಬಿಕೆ ಇದೆ; ನೀವು ನನ್ನನ್ನು ಅರ್ಥಮಾಡಿಕೊಳ್ಳುವಿರೆಂದು ಮತ್ತು ನಿರಾಸೆಗೊಳಿಸುವುದಿಲ್ಲವೆಂದು. ಅದು ಬಿಟ್ಟರೆ ಪ್ರತಿವರ್ಷದಂತೆ ಈ ವರ್ಷವೂ ಸಾಮಾಜಿಕ ಸೇವಾ ಕಾರ್ಯಗಳು ಯಥಾಪ್ರಕಾರ ನಡೆಯಲಿವೆ. ನಿಮ್ಮ ಹಾರೈಕೆ, ಅಭಿಮಾನ ಮತ್ತು ಸಾಂಗತ್ಯವೇ ನನ್ನ ಬಹುದೊಡ್ಡ ಆಸ್ತಿ’ ಎಂದು ಸುದೀಪ್ ಬರೆದಿದ್ದಾರೆ.

Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


