ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರು ಬಳಿ ನಿನ್ನೆ ( ಅಕ್ಟೋಬರ್ 24 ) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಸಿ ಸ್ಲೀಪರ್ ಬಸ್ ಹೊತ್ತಿ ಉರಿದಿದ್ದು, 20 ಮಂದಿ ಸಾವನ್ನಪ್ಪಿದ್ದರು.
ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಕಾವೇರಿ ಟ್ರಾವೆಲ್ಸ್ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಲ್ಲದೇ ಬೈಕ್ ಬಸ್ನ ಡೀಸೆಲ್ ಟ್ಯಾಂಕ್ಗೆ ಗುದ್ದಿದ ಪರಿಣಾಮ ದಿಢೀರನೆ ಬೆಂಕಿ ಹೊತ್ತಿಕೊಂಡು ನಿಮಿಷಗಳಲ್ಲೇ ಇಡೀ ಬಸ್ ಸುಟ್ಟು ಕರಕಲಾಗಿತ್ತು.
ಇನ್ನು ಕಂಡಕ್ಟರ್ ಹಾಗೂ ಡ್ರೈವರ್ ಸೇರಿದಂತೆ ಬಸ್ನಲ್ಲಿ 44 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ 20 ಮಂದಿ ಸಾವನ್ನಪ್ಪಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ 12 ಮಂದಿ ಬಸ್ನಿಂದ ಇಳಿದು ಸಾವಿನಿಂದ ಪಾರಾಗಿದ್ದು, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದರು.
ಹೀಗೆ ಅಪಘಾತವಾದ ಬಸ್ ಕುರಿತು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ಏರ್ಪಟ್ಟಿದ್ದು, ಸ್ಲೀಪರ್ ಬಸ್ಗಳು ಅತಿವೇಗವಾಗಿ ಹಾಗೂ ಅಪಾಯಕಾರಿಯಾಗಿ ಚಲಿಸುತ್ತವೆ ಎಂಬ ಆರೋಪಗಳೂ ಸಹ ಕೇಳಿಬಂದಿವೆ. ಇದೇ ಸಮಯಕ್ಕೆ ನ್ಯೂಸ್ ಮೀಟರ್ ಎಂಬ ಎಕ್ಸ್ ಖಾತೆಯಲ್ಲಿ ಈ ಬಸ್ ಮೇಲೆ ತೆಲಂಗಾಣ ರಾಜ್ಯವೊಂದರಲ್ಲಿಯೇ 23 ಸಾವಿರ ರೂ ದಂಡ ಬಿದ್ದಿತ್ತು ಎಂಬ ಅಂಶವನ್ನು ತಿಳಿಸಲಾಗಿದೆ.
ಒಟ್ಟು 16 ಪ್ರತ್ಯೇಕ ಸನ್ನಿವೇಶಗಳಲ್ಲಿ ಈ ಬಸ್ ಮೇಲೆ ದಂಡ ವಿಧಿಸಲಾಗಿದ್ದು, ಅತಿಯಾದ ವೇಗ, ಅಪಾಯಕಾರಿ ಚಾಲನೆ, ಬಸ್ಗೆ ಪ್ರವೇಶ ಇಲ್ಲದ ಕಡೆ ಬಸ್ ಚಲಾಯಿಸಿದ್ದು, ಡಿಎಲ್ ಇಲ್ಲದೇ ಬಸ್ ಚಲಾಯಿಸಿದ್ದು ಸೇರಿದಂತೆ ಹಲವು ಕಾರಣಗಳಿಗೆ ದಂಡ ಬಿದ್ದಿದೆ.
ಹೀಗೆ ಗಂಭೀರ ಕಾರಣಗಳಿಗೆ ದಂಡಕ್ಕೊಳಗಾಗಿರುವ ಬಸ್ ಮಾಲೀಕ ಇದನ್ನು ಗಮನಿಸಿ ಸಿಬ್ಬಂದಿಗಳನ್ನು ಪ್ರಶ್ನಿಸಲಿಲ್ಲವೇ ಹಾಗೂ ತೆಲಂಗಾಣ ಪೊಲೀಸರು ಈ ಕುರಿತು ಗಮನ ನೀಡಲಿಲ್ಲವೇ ಎಂಬ ಪ್ರಶ್ನೆಗಳು ಇದೀಗ ಮೂಡಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


