ಕರ್ನಾಟಕ ಕಾಂಗ್ರೆಸ್ ಪಕ್ಷದ ನಾಯಕತ್ವ ಬದಲಾವಣೆ ವಿಚಾರ ದೆಹಲಿಗೆ ಶಿಫ್ಟ್ ಆದಂತೆ ಕಾಣುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ವಾಪಸ್ ಆಗಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬೆಂಗಳೂರು ನಗರಕ್ಕೆ ಆಗಮಿಸಿದ್ದಾರೆ. ಅತ್ತ ದೆಹಲಿಯಲ್ಲಿ ಬಿ.ಕೆ.ಹರಿಪ್ರಸಾದ್ ರಾಹುಲ್ ಗಾಂಧಿ ಭೇಟಿ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯದ ಸಂಪೂರ್ಣ ವರದಿಯೊಂದಿಗೆ ದೆಹಲಿಗೆ ವಾಪಸ್ ಆಗುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂಬ ಅವರ ಮಾತು ರಾಜ್ಯ ರಾಜಕೀಯ ದೆಹಲಿಗೆ ಶಿಫ್ಟ್ ಆಗಿದೆ ಎಂಬುದನ್ನು ಸೂಚಿಸುತ್ತದೆ. ಶುಕ್ರವಾರದಿಂದ ಖರ್ಗೆ ಬೆಂಗಳೂರಿನಲ್ಲಿದ್ದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿಲ್ಲ.
ನಾಯಕತ್ವ ಬದಲಾವಣೆ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಹೈಕಮಾಂಡ್ ಈ ಬಿಕ್ಕಟ್ಟು ಪರಿಹಾರ ಮಾಡುವ ಸಂಧಾನ ಸೂತ್ರವನ್ನು ತಯಾರಿ ಮಾಡಿದೆ. ಈ ಜಟಾಪಟಿ ತೀವ್ರವಾದರೆ ಸೂತ್ರವನ್ನು ಮುಂದಿಟ್ಟು, ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಆದರೆ ಎಲ್ಲವೂ ಹೈಕಮಾಂಡ್ ಹೇಳಿದಂತೆ ನಡೆಯಬೇಕು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಬಿಕ್ಕಟ್ಟು ಪರಿಹಾರ ಸೂತ್ರ: ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಬಣದ ಇನ್ನಷ್ಟು ಶಾಸಕರು ದೆಹಲಿಗೆ ಬಂದರೆ ಏನು ಮಾಡಬೇಕು? ಎಂಬ ಬಿಕ್ಕಟ್ಟು ಪರಿಹಾರ ಸೂತ್ರವನ್ನು ಕಾಂಗ್ರೆಸ್ ಹೈಕಮಾಂಡ್ ರಚನೆ ಮಾಡಿದೆ.
1.ಹೈಕಮಾಂಡ್ ಹೇಳಿದಂತೆ ಎಲ್ಲವೂ ನಡೆಯಬೇಕು. ಈ ಸೂತ್ರ ಎಲ್ಲರೂ ಒಪ್ಪುವುದಾದರೆ ನಾಯಕತ್ವ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಹೇಳುವ ತನಕ ಕಾಯಿರಿ ಎಂಬ ಸಂದೇಶ ನೀಡಲಿದೆ.
2. ಯಥಾಸ್ಥಿತಿಯನ್ನು ಮುಂದುವರೆಸಲು ಎರಡೂ ಬಣ ಒಮ್ಮತ ಸೂಚಿಸಿದರೆ ಮಾತ್ರ ಹೈಕಮಾಂಡ್ ಸಂಪುಟ ಪುನರ್ ರಚನೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮುಂತಾದ ಪ್ರಕ್ರಿಯೆಗೆ ಸಮ್ಮತಿ ನೀಡಲಿದೆ.
3. ಯಥಾಸ್ಥಿತಿ ಸೂತ್ರವನ್ನು ಪಾಲಿಸಲು ಒಪ್ಪಿಗೆ ನೀಡಿದರೆ ಕಾಲಮಿತಿಯಲ್ಲಿ ಎಲ್ಲವನ್ನೂ ತೀರ್ಮಾನ ಮಾಡಲಾಗುತ್ತದೆ ಎಂದು ನಾಯಕತ್ವ ಬದಲಾವಣೆ ವಿಚಾರವನ್ನು ಸದ್ಯಕ್ಕೆ ಮುಂದೂಡಿಕೆ ಮಾಡುವುದು.
4. ಶಾಸಕರ, ನಾಯಕರ ವರ್ತನೆಯಿಂದ ಪರಿಸ್ಥಿತಿ ವಿಕೋಪಕ್ಕೆ ಹೋದರೆ ಶಾಸಕರ ಸಮ್ಮುಖದಲ್ಲೇ ಎಲ್ಲವೂ ತೀರ್ಮಾನವಾಗಲಿ ಎಂದು ಸಿಎಲ್‌ಪಿ ಸಭೆ ಕರೆಯಲು ಸೂಚನೆ ಕೊಡುವುದು. ಆಗ ಶಾಸಕರ ಸಂಖ್ಯಾಬಲ ಯಾರ ಕಡೆ ಹೆಚ್ಚಿದೆ? ಎಂಬುದೇ ಮುಖ್ಯವಾಗುತ್ತದೆ.
ಸೋಮವಾರ ಮಾತನಾಡಿದ ಡಿ.ಕೆ.ಶಿವಕುಮಾರ್, “ಸಿದ್ದರಾಮಯ್ಯ ಅವರು ಪಕ್ಷದ ದೊಡ್ಡ ಆಸ್ತಿ. ಅವರು ಹೇಳಿದ ಮಾತು ನಮಗೆ ವೇದವಾಕ್ಯ. ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡಿಕೊಂಡು ಹೋಗುತ್ತೇವೆ. ಅಧಿಕಾರ ಹಂಚಿಕೆ ಬಗ್ಗೆ ನಾನಾಗಲಿ, ಯಾರೇ ಆಗಲಿ ಮಾತನಾಡಿಲ್ಲ” ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, “ಸರ್ಕಾರದಲ್ಲಿ ಯಾವುದೇ ಬದಲಾವಣೆ ಮಾಡುವ ಸಂಬಂಧ ನಮ್ಮಲ್ಲಿ ಹೈಕಮಾಂಡ್‌ನವರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ನಾನು ಹಾಗೂ ಡಿ.ಕೆ.ಶಿವಕುಮಾರ್ ಒಪ್ಪಬೇಕು. ಹೈಕಮಾಂಡ್ ಅನ್ನು ಐದು ತಿಂಗಳ ಹಿಂದೆ ಭೇಟಿಯಾದಾಗ ಸಚಿವ ಸಂಪುಟ ಪುನರ್ ರಚನೆ ಮಾಡಲು ಸೂಚನೆ ನೀಡಿದ್ದರು. ನಾನು ಎರಡೂವರೆ ವರ್ಷ ತುಂಬಿದ ನಂತರ ಮಾಡೋಣ ಎಂದು ತಿಳಿಸಿದ್ದೆ. ಈಗ ಏನು ಸೂಚನೆ ನೀಡುತ್ತಾರೋ ಅದರಂತೆ ನಡೆಯುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಬಣದ ಕೆಲವು ಶಾಸಕರು ಸದ್ಯ ದೆಹಲಿಯಲ್ಲಿಯೇ ಇದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಆಗಲಿ, ಅವರ ಸಹೋದರ ಡಿ.ಕೆ.ಸುರೇಶ್ ಆಗಲಿ ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಖರ್ಗೆ ಜೊತೆ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಸದ್ಯ ರಾಜ್ಯ ರಾಜಕೀಯ ದೆಹಲಿಗೆ ಶಿಫ್ಟ್ ಎಂದು ಹೇಳಬಹುದು. ಆದರೆ ಅಲ್ಲಿ ಯಾವ ತೀರ್ಮಾನವಾಗಲಿದೆ, ಯಾವಾಗ? ಎಂಬ ಪ್ರಶ್ನೆಗೆ ಉತ್ತರವಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


