ಬೆಂಗಳೂರು: ಪೊಲೀಸ್ ಠಾಣೆಯಲ್ಲೇ ಬಿಜೆಪಿ ನಾಯಕರಿಗೆ ಸಭೆ ನಡೆಸಲು ಅವಕಾಶ ನೀಡಿದ ಆರೋಪದ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸ್ ಠಾಣೆಯ ವೃತ್ತ ಅರಕ್ಷಕ ನಿರೀಕ್ಷಕ(ಸಿಪಿಐ) ಮಂಜುನಾಥ್ ನಾಯಕ್ ಅವರನ್ನು ಸೇವೆಯಿಂದ ತತ್ ಕ್ಷಣವೇ ಜಾರಿಯಗುವಂತೆ ಅಮಾನತು ಮಾಡಲಾಗಿದೆ.
ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ಗೆ ವಿಧಾನಪರಿಷತ್‍ನಲ್ಲಿ ಅಶ್ಲೀಲ ಪದ ಪ್ರಯೋಗ ಬಳಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಮೊದಲ ತಲೆದಂಡ ಇದಾಗಿದೆ.
ಖಾನಾಪುರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಆಗಿದ್ದ ಮಂಜುನಾಥ್ ನಾಯಕ್ ಅವರನ್ನು ಬುಧವಾರದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಪಡಿಸಿ ಉತ್ತರ ವಲಯ ಐಜಿಪಿ ವಿಕಾಸ್‍ಕುಮಾರ್ ಆದೇಶ ಹೊರಡಿಸಿದ್ದಾರೆ.
ಕಳೆದ ಗುರುವಾರ ಬೆಳಗಾವಿಯ ಸುವರ್ಣ ವಿಕಾಸಸೌಧದಲ್ಲಿ ನಡೆದ ಕಲಾಪದ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸಿ.ಟಿ.ರವಿ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಸಚಿವೆ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆಂದು ಸಿ.ಟಿ.ರವಿ ವಿರುದ್ಧ ದೂರು ನೀಡದ ನಂತರ ಅವರನ್ನು ಪೊಲೀಸರು ಬಂಧಿಸಿದ್ದರು. ಖಾನಾಪುರ ಸಿಪಿಐ ಮಂಜುನಾಥ್ ನಾಯಕ್ ನೇತೃತ್ವದಲ್ಲಿ ಠಾಣೆಗೆ ಕರೆದೊಯ್ಯಲಾಗಿತ್ತು.
ಈ ವೇಳೆ ಬಿಜೆಪಿ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಕಿಶೋರ್ ಕುಮಾರ್, ಕೇಶವಪ್ರಸಾದ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ಖಾನಾಪುರ ಪೊಲೀಸ್ ಠಾಣೆಗೆ ಬಂದು ರವಿ ಬಂಧನದ ಬಗ್ಗೆ ಮಾಹಿತಿ ಪಡೆದಿದ್ದರು.
ಪೊಲೀಸ್ ಠಾಣೆಯಲ್ಲೇ ಬಿಜೆಪಿ ನಾಯಕರಿಗೆ ಸಭೆ ನಡೆಸಲು ಅವಕಾಶ ಮಾಡಿಕೊಟ್ಟು ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ಮಂಜುನಾಥ್ ನಾಯಕ್ ಅವರನ್ನು ಅಮಾನತುಪಡಿಸಲಾಗಿದೆ.
ಬಿಜೆಪಿ ಆಕ್ಷೇಪ:
ಖಾನಾಪುರ ಇನ್‍ಸ್ಪೆಕ್ಟರ್ ಮಂಜುನಾಥ್ ನಾಯಕ್ ಅವರನ್ನು ಅಮಾನತುಪಡಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಗುಬ್ಬಿ ಮೇಲೆ ಸರ್ಕಾರ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದು ಕೆಳಹಂತದ ಅಧಿಕಾರಿಗಳೇ ನಿಮ್ಮ ಗುರಿ ಏಕೆ ಎಂದು ಪ್ರಶ್ನಿಸಿದೆ.
ಸಿ.ಟಿ.ರವಿ ಬಂಧನವಾದಾಗ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ, ಬೆಳಗಾವಿ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಉತ್ತರ ವಲಯ ಐಜಿಪಿ ವಿಕಾಸ್‍ಕುಮಾರ್, ಬೆಳಗಾವಿ ಜಿಲ್ಲಾ ಎಸ್ಪಿ ಭೀಮಾ ಶಂಕರ್ ಗುಳೇದ ಕೂಡ ಜೊತೆಯಲ್ಲಿದ್ದರು.
ಇವರನ್ನು ಸಹ ಅಮಾನತು ಮಾಡಬೇಕೆಂಬುದು ಬಿಜೆಪಿ ಒತ್ತಾಯವಾಗಿದೆ. ಈ ಕುರಿತು ವಿಕಾಸ್‍ಕುಮಾರ್ ಅವರನ್ನು ಭೇಟಿ ಮಾಡಿದ ಮಾಜಿ ಶಾಸಕರಾದ ಅನಿಲ್ ಬೆನಕೆ ನೇತೃತ್ವದ ನಿಯೋಗವು ಕರ್ತವ್ಯ ಲೋಪ ಎಸಗಿದವರನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಒತ್ತಾಯಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


