ಬೆಂಗಳೂರು;2025ರ ಜೂನ್ 20ರಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಗ್ರಾಹಕರ ಕನಿಷ್ಠ ವಿದ್ಯುತ್ ಶುಲ್ಕ (Minimum Tariff / Fixed Charges) ಮೇಲೆ ರಾಜ್ಯ ಸರ್ಕಾರ ವಿಧಿಸಿದ್ದ ತೆರಿಗೆ ಅಸಾಂವಿಧಾನಿಕ ಎಂದು ಘೋಷಿಸಿದೆ.ಹೈಕೋರ್ಟ್ ತೀರ್ಪಿನ ಪ್ರಕಾರ, ಗ್ರಾಹಕರು ಬಳಸದ ವಿದ್ಯುತ್‌ಗೆ ತೆರಿಗೆ ಕಟ್ಟಬೇಕಿಲ್ಲ ಬಳಸಿದ ವಿದ್ಯುತ್‌ಗೆ ಮಾತ್ರ ತೆರಿಗೆ ವಿಧಿಸಬಹುದು ಎಂಬುದು ಸ್ಪಷ್ಟವಾಗಿದೆ. ನ್ಯಾಯಮೂರ್ತಿ ಅನಂತ ರಾಮನಾಥ ಹೆಗ್ಡೆ ಅವರಿದ್ದ ಹೈಕೋರ್ಟ್ ಪೀಠವು, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಕೃಷಿ ಪಂಪ್ ಸೆಟ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಗ್ರಾಹಕರಿಗೆ ಈ ತೀರ್ಪು ಅನ್ವಯಿಸುತ್ತದೆ.
ಅರ್ಜಿದಾರರು ಮತ್ತು ಪ್ರಕರಣದ ಹಿನ್ನೆಲೆ:
ಈ ಪ್ರಕರಣದ ಸಂಬಂಧ 2008ರಲ್ಲಿ ಸೋನಾ ಸಿಂಥೆಟಿಕ್ಸ್, ಶ್ರೀ ಕೃಷ್ಣ ಸ್ಟಿನ್ನಿಂಗ್ ಮತ್ತು ವೀವಿಂಗ್ ಮಿಲ್ಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಹತ್ತು ಕಂಪನಿಗಳು, ಹಾಗೂ 2009ರಲ್ಲಿ FKCCI (Federation of Karnataka Chambers of Commerce and Industry) ಅವರು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು, ಬಳಸದ ವಿದ್ಯುತ್ ಗೆ ಕೂಡ ಸರ್ಕಾರ ತೆರಿಗೆ ವಿಧಿಸುತ್ತಿರುವುದನ್ನು ಪ್ರಶ್ನಿಸಿದ್ದರು.
ಏನಿದು ಪ್ರಕರಣ?
*2003 ಮತ್ತು 2004ರಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ವಿದ್ಯುತ್ (ಬಳಕೆಯ ಮೇಲಿನ ತೆರಿಗೆ) ಕಾಯ್ದೆ, 1959ರ ಸೆಕ್ಷನ್ 3(1)ಗೆ ತಿದ್ದುಪಡಿ ಮಾಡಿ, ಗ್ರಾಹಕರು ಬಳಸದಿದ್ದರೂ ಪೂರೈಕೆಗಾಗಿ ವಿಧಿಸುವ ಕನಿಷ್ಠ ವಿದ್ಯುತ್ ಶುಲ್ಕಗಳ (Minimum Charges) ಮೇಲೂ ತೆರಿಗೆ ವಿಧಿಸುವಂತೆ ನಿಯಮ ರೂಪಿಸಿತು.
*ಈ ತಿದ್ದುಪಡಿ ಅನ್ವಯ, ಕೃಷಿ ಪಂಪ್ ಸೆಟ್ (10 HPವರೆಗೆ), ಭಾಗ್ಯ ಜ್ಯೋತಿ ಮತ್ತು ಕುಟೀರ ಜ್ಯೋತಿ ಗ್ರಾಹಕರನ್ನು ಹೊರತುಪಡಿಸಿ ಉಳಿದ ಎಲ್ಲ ಗ್ರಾಹಕರಿಗೆ ಕನಿಷ್ಠ ವಿದ್ಯುತ್ ಶುಲ್ಕದ ಮೇಲೂ 5% ಅಡ್ವಾಲೊರಂ ತೆರಿಗೆ ವಿಧಿಸಲಾಗುತ್ತಿತ್ತು.
*ಈ ನಿಯಮದ ವಿರುದ್ಧವಾಗಿ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI), ಮೆಸಸ್ ಸೋನಾ ಸಿಂಥೆಟಿಕ್ಸ್ ಕಂಪನಿ ಮತ್ತು ಇನ್ನಿತರ ಸಂಸ್ಥೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, “ಬಳಸದ ವಿದ್ಯುತ್‌ಗೆ ತೆರಿಗೆ ವಿಧಿಸುವುದು ಅಸಂವಿಧಾನಿಕ” ಎಂದು ಪ್ರಶ್ನಿಸಿದರು
ಈ ತೀರ್ಪಿನಿಂದಾಗಿ ವಿದ್ಯುತ್ ಸರಬರಾಜು ಕಂಪನಿಗಳು ಅರ್ಜಿದಾರ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಹಿಂತಿರುಗಿಸುವ ಅನಿವಾರ್ಯತೆ ಎದುರಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸರ್ಕಾರ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಈ ವೆಚ್ಚವನ್ನು ಪೂರೈಸಲು, ಇಂಧನ ಇಲಾಖೆ ಅಥವಾ ಕೆಪಿಟಿಸಿಎಲ್ ನೌಕರರ ಪಿಂಚಣಿ ಹಾಗೂ ಗ್ರ್ಯಾಚ್ಯುಟಿ ಮೊತ್ತವನ್ನು ಗ್ರಾಹಕರಿಂದಲೇ ವಿದ್ಯುತ್ ಬಿಲ್‌ನಲ್ಲಿ ವಸೂಲಿ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ. ಬೆಸ್ಕಾಂ ನೀಡುವ ಬಿಲ್‌ನಲ್ಲಿ ಹೊಸ ಕಾಲಂ ಸೇರಿಸಿ, ಪ್ರತಿ ಯುನಿಟ್ ವಿದ್ಯುತ್ ಮೇಲೆ 36 ಪೈಸೆ ಪಿಂಚಣಿ ವಸೂಲಿ ಮಾಡಲಾಗುತ್ತಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ವಸೂಲಿ ಮುಂದಿನ ಎರಡು ವರ್ಷಗಳ ಕಾಲ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.ಒಟ್ಟಿನಲ್ಲಿ, ಸರ್ಕಾರ ಒಂದು ಕೈಯಲ್ಲಿ ಸೌಲಭ್ಯ ನೀಡುವಂತೆ ತೋರಿಸಿ, ಮತ್ತೊಂದು ಕೈಯಲ್ಲಿ ಹೊಸ ಹೊಸ ವಿಧಾನದ ಮೂಲಕ ಹಣ ವಸೂಲಿ ಮಾಡುತ್ತಿರುವುದರಿಂದ ಜನಸಾಮಾನ್ಯರ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ.
ಜುಲೈ 1ರಿಂದ ರೈಲ್ವೆ ಟಿಕೆಟ್ ದರ ಏರಿಕೆ: ಇಲ್ಲಿದೆ ಹೊಸ ದರಗಳ ವಿವರ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


