ಭಾರತದ ಅತಿ ಹೆಚ್ಚು ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಸಹ ಸೇರಿದೆ. ಎರಡು ಟರ್ಮಿನಲ್‌ಗಳನ್ನು ಹೊಂದಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಆಗಮಿಸುತ್ತಾರೆ. 500ಕ್ಕೂ ಹೆಚ್ಚು ವಿಮಾನಗಳು ಆಗಮಿಸುತ್ತವೆ.
ದೇಶದ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆಯಲ್ಲಿ 3ನೇ ಸ್ಥಾನದಲ್ಲಿದೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು. ಈ ಹಿನ್ನಲೆಯಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಹತ್ವದ ಸೂಚನೆಯೊಂದನ್ನು ನೀಡಿದೆ.
ಎಎಐ ವರ್ಷಕ್ಕೆ 114 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಲುವಾಗಿ ವಿಮಾನ ನಿಲ್ದಾಣಕ್ಕೆ ಹೊಸ ಎಟಿಸಿ ಟವರ್ ನಿರ್ಮಾಣ ಮಾಡವಂತೆ ಸೂಚಿಸಿದೆ. ವಿಮಾನಗಳ ಚಲನವಲನ ಮತ್ತು ಲ್ಯಾಂಡಿಂಗ್ ವೇಳೆ ಅತಿ ಮಹತ್ವದ ಪಾತ್ರವನ್ನು ಎಟಿಸಿ ಕೇಂದ್ರ ವಹಿಸುತ್ತದೆ.
ಹೊಸ ಎಟಿಸಿ ಕೇಂದ್ರ ಸ್ಥಾಪನೆ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಿಐಎಎಲ್ ನಿರ್ವಹಣೆ ಮಾಡುತ್ತದೆ. ಹೊಸ ಎಟಿಸಿ ಕೇಂದ್ರದ ವಿನ್ಯಾಸ, ನಿರ್ಮಾಣ ಮತ್ತು ನಿರ್ವಹಣೆಗಾಗಿ ಅದು ಆಸಕ್ತಿ ಹೊಂದಿದ ಸಂಸ್ಥೆಯಿಂದ ಟೆಂಡರ್ ಕರೆದಿದೆ.
ಹೊಸ ಎಟಿಸಿ ಟವರ್ ಕಾರ್ಯಾಚರಣೆ ಭದ್ರತೆಯನ್ನು ಹೆಚ್ಚಿಸುವುದು, ತುರ್ತು ನಿರ್ವಹಣೆಯನ್ನು ಬಲಪಡಿಸುವುದು, ಹವಾಮಾನಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಸುಧಾರಿಸುವುದು, ಅಡೆತಡೆಯ ಕುರಿತು ಜಾಗೃತಿಯನ್ನು ಹೆಚ್ಚಿಸುವುದು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ ಎಂದು ಟೆಂಡರ್‌ನಲ್ಲಿ ತಿಳಿಸಲಾಗಿದೆ.
4009 ಎಕರೆ ಪ್ರದೇಶದಲ್ಲಿ ಇರುವ ವಿಮಾನ ನಿಲ್ದಾಣ 2 ರನ್ ವೇ, 2 ಟರ್ಮಿನಲ್, ಟ್ಯಾಕ್ಸಿ ಬೇ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡಿದೆ. ಸದ್ಯ ಇರುವ ಎಟಿಸಿ ಕೇಂದ್ರ 2 ರನ್ ವೇಯ ವಿಮಾನ ಹಾರಾಟದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ.
ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಗಮನಿಸಿರುವ ಎಎಐ ಹೊಸ ಎಟಿಸಿ ಕೇಂದ್ರವನ್ನು ಸ್ಥಾಪನೆ ಮಾಡುವಂತೆ ಸೂಚಿಸಿದೆ. 2024ರಲ್ಲಿ ವಿಮಾನ ನಿಲ್ದಾಣ 43 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಣೆ ಮಾಡಿದೆ. ಭಾರತದ ದೇಶಿಯ ವಿಮಾನಯಾನ ಸೇವೆಯಲ್ಲಿ ಬೆಂಗಳೂರು ಬಹುದೊಡ್ಡ ಸಂಚಾರಿ ಹಬ್ ಆಗಿದೆ.
ವಿಮಾನ ನಿಲ್ದಾಣಕ್ಕೆ ತುರ್ತಾಗಿ ಅಗತ್ಯವಿರುವುದು ಹೊಸ ಟವರ್ ಮಾತ್ರವಲ್ಲ, ಒಂದು ಏಕೀಕೃತ ಏರ್ ಟ್ರಾಫಿಕ್ ಸರ್ವೀಸಸ್ ಸಂಕೀರ್ಣ ಎಂದು ಅಧಿಕಾರಿಗಳು ಹೇಳಿದ್ದಾರೆ. 17 ವರ್ಷಗಳ ಹಿಂದೆ ನಿರ್ಮಿಸಲಾದ ಈಗಿರುವ ಎಟಿಸಿ ಕಟ್ಟಡದಲ್ಲಿ ಜಾಗದ ಕೊರತೆಯಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಾರ್ಗಸೂಚಿಗಳ ಪ್ರಕಾರ ಎಟಿಸಿ/ ಎಟಿಎಸ್ ಕೇಂದ್ರಗಳಲ್ಲಿ ನಿಯಂತ್ರಕರಿಗೆ ಸಮರ್ಪಕ ವಿಶ್ರಾಂತಿ ಕೊಠಡಿ, ಶವರ್ ಸೌಲಭ್ಯಗಳು, ಜಿಮ್ ಅಥವಾ ಮನರಂಜನಾ ಲೌಂಜ್, ದೈಹಿಕ-ಮಾನಸಿಕ ದಣಿವನ್ನು ಕಡಿಮೆ ಮಾಡುವ ಮನರಂಜನಾ ಪ್ರದೇಶಗಳಿರಬೇಕು. ಅಲ್ಲದೇ ಲಾಕರ್‌ಗಳು, ವೃತ್ತಿಪರ ತರಬೇತಿ ಕೊಠಡಿಗಳನ್ನು ಹೊಂದಿರಬೇಕು.
ಸದ್ಯ ಬೆಂಗಳೂರು ವಿಮಾನ ನಿಲ್ದಾಣಕ್ಕೆ 500 ವಿಮಾನಗಳು ಆಗಮಿಸುತ್ತಿದ್ದು, ಇಲ್ಲಿಂದ 800 ವಿಮಾನಗಳು ಹಾರಾಟವನ್ನು ನಡೆಸುತ್ತವೆ. ಮುಂದಿನ ಕೆಲವೇ ವರ್ಷಗಳಲ್ಲಿ ಇದು 1600ಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಎರಡು ರನ್ ವೇ, ಟರ್ಮಿನಲ್ ನಿರ್ವಹಣೆ ಮಾಡಲು ಹೊಸ ಎಟಿಸಿ ಕೇಂದ್ರ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭವಿಷ್ಯದಲ್ಲಿ ಡ್ರೋನ್, ಏರ್ ಟ್ಯಾಕ್ಸಿಗಳನ್ನು ಸಹ ಎಟಿಸಿ ಕೇಂದ್ರ ನಿರ್ವಹಣೆ ಮಾಡಬೇಕಾಗುತ್ತದೆ. ಆದ್ದರಿಂದ ಆಧುನಿಕ ತಂತ್ರಜ್ಞಾನದಿಂದ ಕೂಡಿದ ಹೊಸ ಎಟಿಸಿ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


