ಬೆಂಗಳೂರು: ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕರ್ನಾಟಕಕ್ಕೆ ಯಾವ ಮುಖ ಇಟ್ಟುಕೊಂಡು ಬರುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಹುಲ್ ಗಾಂಧಿ, ಕಾಂಗ್ರೆಸ್ ಹಾಗೂ ಆಡಳಿತಾರೂಢ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಕಳೆದ 24 ತಿಂಗಳಲ್ಲಿ 2,000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದಾಗ ಬರಲಿಲ್ಲ. ಇಷ್ಟಕ್ಕೂ ನಿಮಗೆ ಕರ್ನಾಟಕ ಈಗ ನೆನಪಾಯಿತೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೈಲಾಗದವನು ಮೈಪರಚಿಕೊಂಡ ಎಂಬಂತೆ ಕೈಲಾಗದ ರಾಹುಲ್ ಗಾಂಧಿ ಚುನಾವಣಾ ಪ್ರಕ್ರಿಯೆ ಬಗ್ಗೆ ಕ್ಯಾತೆ ತೆಗೆಯುತ್ತಿದ್ದಾರೆ! ಮೂರು ಲೋಕಸಭಾ ಚುನಾವಣೆಗಳಲ್ಲಿ ಮೂರಂಕಿ ದಾಟಲಾಗದೆ ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಮುಳುಗಿಸಿ ಸೋತು ಸುಣ್ಣವಾಗಿರುವ ಬಾಲಕ ಬುದ್ಧಿ ರಾಹುಲ್ ಗಾಂಧಿ ಅವರು ಈಗ ಕರ್ನಾಟಕದಲ್ಲಿ ಚುನಾವಣಾ ಆಯೋಗದ ವಿರುದ್ಧ ಪಾದಯಾತ್ರೆ ಮಾಡುತ್ತಾರಂತೆ ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಅವರೇ, ಯಾವ ಪುರುಷಾರ್ಥಕ್ಕಾಗಿ ಈ ಪಾದಯಾತ್ರೆ? ಹರಿಯಾಣ, ಮಹಾರಾಷ್ಟ್ರ, ದೆಹಲಿ ನಂತರ ಈಗ ಬಿಹಾರದಲ್ಲೂ ಹೀನಾಯ ಸೋಲಿನ ಮುನ್ಸೂಚನೆ ಸಿಕ್ಕಿದೆಯೇ? ಎಂದು ಮರು ಪ್ರಶ್ನೆ ಮಾಡಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧಿ ಪೂರೈಕೆಯಿಂದ 500ಕ್ಕೂ ಹೆಚ್ಚು ಗರ್ಭಿಣಿ, ಬಾಣಂತಿ ಮಹಿಳೆಯರು, ನವಜಾತ ಶಿಶುಗಳು ಮರಣ ಹೊಂದಿದಾಗ ಬರಲಿಲ್ಲ, ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದಿಂದ 50ಕ್ಕೂ ಹೆಚ್ಚು ಬಡವರು ಆತ್ಮಹತ್ಯೆ ಮಾಡಿಕೊಂಡಾಗ ಬರಲಿಲ್ಲ, ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸರ್ಕಾರದ ಎಡವಟ್ಟಿನಿಂದ 11 ಜನ ಅಮಾಯಕ ಯುವಕರು ಸತ್ತಾಗ ಬರಲಿಲ್ಲ.
ಈಗ ನಾಳೆ ಎದುರಾಗಲಿರುವ ಬಿಹಾರ ಚುನಾವಣಾ ಸೋಲಿಗೆ ಕುಂಟು ನೆಪ ಸೃಷ್ಟಿಸಿ ತಮ್ಮ ಅಸಾಮರ್ಥ್ಯಕ್ಕೆ, ವೈಫಲ್ಯಕ್ಕೆ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳೋಕೆ ಬರುತ್ತಿದ್ದೀರಲ್ಲ, ನಿಮ್ಮ ಕಾಂಗ್ರೆಸ್ ಪಕ್ಷದ ಲಜ್ಜೆಗೇಡಿತನಕ್ಕೆ ಕನ್ನಡಿಗರು ರೋಸಿ ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯರಿಂದ ಸಿಎಂ ಸ್ಥಾನ ಕೈತಪ್ಪಿದೆ ಎಂದ್ರಾ ಮಲ್ಲಿಕಾರ್ಜುನ ಖರ್ಗೆ? ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


