ಬೆಂಗಳೂರು ನಗರದಿಂದ ಉತ್ತರ ಕರ್ನಾಟಕ ಭಾಗಕ್ಕೆ ಸಂಚಾರ ನಡೆಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಗುಡ್ ನ್ಯೂಸ್ ನೀಡಿದೆ. ಎರಡು ತಾತ್ಕಾಲಿಕ ರೈಲುಗಳನ್ನು ಖಾಯಂಗೊಳಿಸಲಾಗಿದ್ದು, ಪ್ರತಿದಿನ ಸಂಚಾರ ನಡೆಸಲಿವೆ.
ಈ ಕುರಿತು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಡಿಸೆಂಬರ್ 2025 ರಿಂದ ಹುಬ್ಬಳ್ಳಿ-ಬೆಂಗಳೂರು ಮತ್ತು ಯಶವಂತಪುರ-ವಿಜಯಪುರ ವಿಶೇಷ ರೈಲುಗಳು ಖಾಯಂ ರೈಲುಗಳಾಗಿ ಸಂಚಾರ ನಡೆಸಲಿದೆ ಎಂದು ಹೇಳಿದೆ.
ಕರ್ನಾಟಕದ ಪ್ರಮುಖ ನಗರಗಳ ನಡುವೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮತ್ತು ಸುಗಮ ಸಂಪರ್ಕವನ್ನು ಖಚಿತಪಡಿಸಲು ಎರಡು ವಿಶೇಷ ರೈಲು ಸೇವೆಗಳನ್ನು ನಿಯಮಿತಗೊಳಿಸಿ ರೈಲ್ವೆ ಮಂಡಳಿಯು ಅನುಮೋದನೆ ನೀಡಿದೆ ಎಂದು ತಿಳಿಸಿದೆ.
ಈ ರೈಲುಗಳು ಬೇಡಿಕೆಯ ಮೇರೆಗೆ (Trains on Demand) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಡಿಸೆಂಬರ್ 2025 ರಿಂದ ನಿಯಮಿತ, ಪ್ರತಿದಿನದ ರೈಲುಗಳಾಗಿ ಸಂಚಾರವನ್ನು ನಡೆಸಲಿವೆ. ರೈಲಿನ ವೇಳಾಪಟ್ಟಿ, ನಿಲ್ದಾಣಗಳ ಮಾಹಿತಿಯನ್ನು ಸಹ ಬಿಡುಗಡೆ ಮಾಡಲಾಗಿದೆ.
ರೈಲುಗಳ ವಿವರ
- ರೈಲು ಸಂಖ್ಯೆ 07339/ 07340 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಸೂಪರ್‌ಫಾಸ್ಟ್ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ರೈಲು ಸಂಖ್ಯೆ 20687/ 20688 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಎಂದು ಬದಲಾವಣೆ ಮಾಡಲಾಗಿದೆ.
- ರೈಲು ಸಂಖ್ಯೆ 20687 ಡಿಸೆಂಬರ್ 8 ರಿಂದ ತನ್ನ ಸಂಚಾರವನ್ನು ಪ್ರಾರಂಭಿಸಲಿದೆ. ಈ ರೈಲು ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ರಾತ್ರಿ 11:15ಕ್ಕೆ ಹೊರಟು ಮರುದಿನ ಬೆಳಿಗ್ಗೆ 6:50ಕ್ಕೆ ಕೆಎಸ್‌ಆರ್ ಬೆಂಗಳೂರು ತಲುಪುತ್ತದೆ. ರೈಲು ಸಂಖ್ಯೆ 20688 ಸೇವೆ ಡಿಸೆಂಬರ್ 9ರಿಂದ ಪ್ರಾರಂಭ. ಈ ರೈಲು ಕೆಎಸ್‌ಆರ್ ಬೆಂಗಳೂರಿನಿಂದ ರಾತ್ರಿ 11:55ಕ್ಕೆ ಹೊರಟು ಬೆಳಗ್ಗೆ 7:30ಕ್ಕೆ ಎಸ್‌ಎಸ್‌ಎಸ್ ಹುಬ್ಬಳ್ಳಿ ತಲುಪಲಿದೆ.
- ಈ ರೈಲು 1 ಎಸಿ 2-ಟೈರ್, 1 ಎಸಿ 3-ಟೈರ್, 11 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್‌ಡಿ ಬೋಗಿಗಳನ್ನು ಒಳಗೊಂಡಿರುತ್ತದೆ. ಈ ರೈಲುಗಳು ಮಾರ್ಗದಲ್ಲಿ ಎಸ್‌ಎಂಎಂ ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಮತ್ತು ಯಶವಂತಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
- ರೈಲು ಸಂಖ್ಯೆ 06545/ 06546 ಯಶವಂತಪುರ-ವಿಜಯಪುರ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್ ರೈಲು 16547/ 16548 ಎಂದು ಬದಲಾವಣೆ ಮಾಡಿ ಯಶವಂತಪುರ-ವಿಜಯಪುರ-ಯಶವಂತಪುರ ಪ್ರತಿದಿನದ ಸೇವೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
- ರೈಲು ಸಂಖ್ಯೆ 16547 ಡಿಸೆಂಬರ್ 8 ರಿಂದ ಸಂಚಾರ ಪ್ರಾರಂಭಿಸಲಿದೆ. ರೈಲು ಯಶವಂತಪುರದಿಂದ ರಾತ್ರಿ 9:30ಕ್ಕೆ ಹೊರಟು ಮರುದಿನ ಬೆಳಗ್ಗೆ 11:25ಕ್ಕೆ ವಿಜಯಪುರ ತಲುಪಲಿದೆ. ರೈಲು ಸಂಖ್ಯೆ 16548 ಡಿಸೆಂಬರ್ 9ರಿಂದ ಸಂಚಾರ ಪ್ರಾರಂಭವಾಗಲಿದೆ. ರೈಲು ವಿಜಯಪುರದಿಂದ ಮಧ್ಯಾಹ್ನ 1:50ಕ್ಕೆ ಹೊರಟು ಮರುದಿನ ಬೆಳಗಿನ ಜಾವ 5:10ಕ್ಕೆ ಯಶವಂತಪುರ ತಲುಪಲಿದೆ.
- ಈ ರೈಲುಗಳು 1 ಎಸಿ 3-ಟೈರ್, 4 ಸ್ಲೀಪರ್ ಕ್ಲಾಸ್, 6 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್‌ಡಿ ಬೋಗಿಗಳನ್ನು ಒಳಗೊಂಡಿರುತ್ತದೆ. ಈ ರೈಲುಗಳು ಮಾರ್ಗದಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಹೊಸದುರ್ಗ ರೋಡ್, ಚಿಕ್ಕಜಾಜೂರು, ದಾವಣಗೆರೆ, ಹರಪನಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮಾರಿಯಮ್ಮನಹಳ್ಳಿ, ಹೊಸಪೇಟೆ, ಕೊಪ್ಪಳ, ಗದಗ, ಮಲ್ಲಾಪುರ, ಹೋಳೆ ಆಲೂರು, ಬದಾಮಿ, ಗುಳೇದಗುಡ್ಡ ರೋಡ್, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ಈ ಪ್ರತಿದಿನದ ರೈಲು ಸೇವೆಯಿಂದ ಕರ್ನಾಟಕದ ಪ್ರಮುಖ ನಗರಗಳು ಮತ್ತು ಪಟ್ಟಣಗಳ ನಡುವಿನ ದೈನಂದಿನ ಸಂಪರ್ಕ ಸುಲಭವಾಗಲಿದೆ. ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರು, ವ್ಯಾಪಾರಿಗಳು ಮತ್ತು ಈ ಪ್ರದೇಶದ ಎಲ್ಲಾ ವರ್ಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


