ಕೆಂಡ ಸಂಪಿಗೆ ಹಾಗೂ ಟಗರು ರೀತಿಯ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಅಪ್ಪಟ ಕನ್ನಡ ಪ್ರತಿಭೆ ಮಾನ್ವಿತಾ ಕಾಮತ್ ನಿನ್ನೆ ( ಮಾರ್ಚ್ 30 ) ಯುಗಾದಿ ಹಬ್ಬ ಪ್ರಯುಕ್ತ ಭಾಗವಹಿಸಿದ ಸಂದರ್ಶನದಲ್ಲಿ ಇಂಡಸ್ಟ್ರಿಯ ಕೆಟ್ಟ ಕಣ್ಣುಗಳು ಹಾಗೂ ಏಳಿಗೆ ಸಹಿಸದ ವ್ಯಕ್ತಿಗಳ ಬಗ್ಗೆ ಮಾತನಾಡಿದ್ದಾರೆ.
ತಾನು ಯಾವುದೇ ಕೆಲಸ ಮಾಡುವ ಮುನ್ನ ಹೇಳಿಕೊಳ್ಳುವುದಿಲ್ಲ, ಹೇಳಿಕೊಂಡರೆ ಬಿಲ್ಡಪ್ ಎಂದು ಕಾಲೆಳೆಯುತ್ತಾರೆ ಹಾಗೂ ಕೆಟ್ಟ ಕಣ್ಣುಗಳು ಬೀಳುತ್ತವೆ ಎಂದ ಮಾನ್ವಿತಾ ರಾಕಿಂಗ್ ಸ್ಟಾರ್ ಯಶ್ ಕುರಿತು ನಿರ್ಮಾಪಕ ಹಾಗೂ ಆತನ ಗುಂಪು ಆತ ಸೋಲಬೇಕು ಎನ್ನುವ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದನ್ನು ಬಿಚ್ಚಿಟ್ಟಿದ್ದಾರೆ.
‘ಒಂದು ಮೀಟಿಂಗ್‌ನಲ್ಲಿ ಕುಳಿತಿದ್ದೆವು, ಒಂದೇ ಸಿನಿಮಾ ಮಾಡಿರುವ ನಿರ್ಮಾಪಕ, ನನಗೂ ಸಹ ಅವರು ಸ್ನೇಹಿತರೇ. ಅವರು ಏಯ್… ಯಶ್ ನಂಗೆ ಅವಾಗಿಂದ ಗೊತ್ತು ಅನ್ನೋ ಥರದಲ್ಲಿ ಮಾತನಾಡುತ್ತಿದ್ದರು. ಗೊತ್ತಿದ್ರೆ ಒಳ್ಳೆಯದು ಅಂದುಕೊಂಡೆ. ಅವರು ಹೇಗೆ ಮಾತನಾಡಿಕೊಳ್ಳುತ್ತಿದ್ದರು ಎಂದರೆ ಅವರೆಲ್ಲ ಯಶ್ ಕೆಳಗೆಬೀಳಲಿ ಅಂತ ಕಾಯ್ತಾ ಇರೋ ಥರ ಮಾತನಾಡಿಕೊಳ್ಳುತ್ತಿದ್ದರು. ಟಾಕ್ಸಿಕ್ ಹಿಟ್ ಆಗಬೇಕು, ಅದರಿಂದ ಇನ್ನೂ ಕೆಲಸ ಹೊರಗೆಬರುತ್ತೆ. ಆ ವ್ಯಕ್ತಿ ಏನೋ ವಿಷನ್ ಇಟ್ಟುಕೊಂಡು ಹೋಗ್ತಾರೆ, ಅವರಿಗೆ ಒಳ್ಳೆಯದಾದರೆ ಇಂಡಸ್ಟ್ರಿಗೆ ಒಳ್ಳೆದಾಗುತ್ತೆ ಅನ್ನೋ ಮನೋಭಾವನೆಯೇ ಅವರಲ್ಲಿ ಇರಲಿಲ್ಲ. ಹೀಗೆ ಮಾತಾಡ್ತಾನೇ ಇದ್ದಾರೆ. ಯಾರೋ ಇಪ್ಪತ್ತು ಜನ ಕೂತ್ಕೊಂಡು ಒಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದಾಗ ನಾನು ಅಲ್ಲಿ 21ನೇಯವಳು ಆಗುವಂಥವಳಲ್ಲ. ನಾನು ನೇರವಾಗಿ ಹೇಳುವವಳು. ಅವತ್ತೂ ಅದನ್ನೇ ಮಾಡಿದೆ. ನೀವ್ಯಾರು ಉದ್ಧಾರ ಆಗಲ್ಲ ಏಕೆಂದರೆ ನೀವು ಒಬ್ರು ಬೀಳೋಕೆ ಕಾಯ್ತಾ ಇದ್ದೀರ, ಒಬ್ಬರ ಏಳಿಗೆಗೆ ಕಾಯ್ತಾ ಇಲ್ಲ ನೀವು. ಒಬ್ಬ ನಟ, ನಟಿ ಅಥವಾ ಒಂದು ಚಿತ್ರ ನಿರ್ಮಾಣ ಸಂಸ್ಥೆ ಬೆಳೆಯುತ್ತಾ ಇದೆ ಎಂದರೆ ಅವರ ಜೊತೆ ನಿಲ್ಲಬೇಕು ಎಂದುಕೊಳ್ಳಲ್ಲ, ಬರೀ ಅವರನ್ನು ನೋಡಿಕೊಂಡು ನಗಬೇಕು ಅಷ್ಟೇ’ ಎಂದು ಮಾನ್ವಿತಾ ಕಾಮತ್ ಟಿವಿ5 ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


