ಬೆಂಗಳೂರು: ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಜರುಗಿದ್ದು, ನಗರದ ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಭುವನೇಶ್ವರಿ ಹಾಗೂ ಅಣ್ಣಮ್ಮ ದೇವತೆಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಈ ಕಾರ್ಯಕ್ರಮಕ್ಕೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸಹ ಆಗಮಿಸಿದ್ದರು. ಈ ವೇಳೆ ವಾಟಾಳ್ ನಾಗರಾಜ್ ಅವರನ್ನು ಸಿಎಂ ಸಿದ್ದರಾಮಯ್ಯ ಹಾಡಿ ಹೊಗಳಿದರು. ಅದೇ ರೀತಿ ವಾಟಾಳ್ ನಾಗರಾಜ್ ಸಹ ಸಿದ್ದರಾಮಯ್ಯ ಪರ ಮಾತನಾಡಿ ಪ್ರಸ್ತುತ ನಡೆಯುತ್ತಿರುವ ಸಿಎಂ ಬದಲಾವಣೆ ಚರ್ಚೆಗೆ ಸಂಬಂಧಿಸಿದಂತೆ ಸಿದ್ದು ವಿರೋಧಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಸಿದ್ದರಾಮಯ್ಯ ಎಂದರೆ ತಮಗೆ ಪ್ರೀತಿ ಹಾಗೂ ಗೌರವ ಎಂದ ವಾಟಾಳ್ ನಾಗರಾಜ್ ಅವರಿಗೆ ಆರೋಗ್ಯ ಚೆನ್ನಾಗಿರಬೇಕು ಎಂದು ಆಶಿಸಿದರು. ಎಲ್ಲಿಯವರೆಗೆ ನಿಮಗೆ ಆರೋಗ್ಯ ಚೆನ್ನಾಗಿರುತ್ತೋ ಅಲ್ಲಿವರೆಗೆ ನೀವು ಮುಖ್ಯಮಂತ್ರಿಯಾಗಿರಿ. ಇದನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ, ಅಭಿಮಾನದಿಂದ ಹೇಳುತ್ತಿದ್ದೇನೆ ಎಂದರು.
ತಾವು ಮುಖ್ಯಮಂತ್ರಿಯಾಗಿ ಇರುವುದರಿಂದ ಒಂದು ರೀತಿ ಈ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ, ಪ್ರೀತಿ, ಅಭಿಮಾನ ಇದೆಲ್ಲವೂ ಇದೆ. ನಾನು ಅನೇಕ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಂತರ ಮುಂದೇನು ಎಂದು ಯೋಚನೆ ಮಾಡುತ್ತಾ ಇರುತ್ತೇನೆ. ಸಂವಿಧಾನದ ಪ್ರಕಾರ ಯಾರು ಬೇಕಾದರೂ ಬರಬಹುದು, ಆದರೆ ಈ ರಾಜ್ಯವನ್ನು ನಡೆಸಿಕೊಂಡು ಬಂದಂತಹ ಇತಿಹಾಸವನ್ನು ನೋಡಿದಾಗ ಕನ್ನಡಿಗರು ಅತಿ ಪ್ರೀತಿಯಿಂದ ಕಾಣುವಂತಹ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಎಂಥ ಸಂದರ್ಭ ಬಂದರೂ ನಾವು ಅವರಿಗೆ ಬೆಂಬಲವನ್ನು ಕೊಡುತ್ತೇವೆ. ಯಾವುದೇ ಕಾರಣಕ್ಕೂ ನೀವು ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ, ಒತ್ತಾಯಕ್ಕೆ ಮಣಿಯುವುದು ಬೇಕಾಗಿಲ್ಲ, ರಾಜೀನಾಮೆ ಕೊಡಲೇಬಾರದು. ಅಂತಹ ಸಂದರ್ಭ ಬಂದರೆ ಈ ರಾಜ್ಯದಲ್ಲಿ ಅದೇನಾಗುತ್ತೆ ನೋಡೇಬಿಡೋಣ, ಹೆದರಬೇಕಾಗಿಲ್ಲ, ನಾವೆಲ್ಲ ನಿಮ್ಮ ಜೊತೆ ಅದ್ಭುತವಾಗಿ ನಿಲ್ಲುತ್ತೇವೆ, ಇದು ಇವತ್ತಿನದ್ದಲ್ಲ, ಹತ್ತಾರು ವರ್ಷಗಳಿಂದ ಇದನ್ನೇ ಹೇಳಿಕೊಂಡು ಬಂದಿದ್ದೇವೆ, ನಿಮಗೆ ಒಳ್ಳೆಯದಾಗಲಿ ಎಂದು ವಾಟಾಳ್ ನಾಗರಾಜ್ ವೇದಿಕೆ ಮೇಲೆ ಸಿದ್ದರಾಮಯ್ಯ ಪರ ನಿಂತು ರಾಜೀನಾಮೆ ಕೇಳುವವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಚಿನ್ನದ ದರದಲ್ಲಿ ಮತ್ತೆ ಇಳಿಕೆ: ಇಂದಿನ ಬೆಲೆ ಎಷ್ಟು ಗೊತ್ತಾ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


