ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಚಲನಚಿತ್ರ ಉಪಸಮಿತಿ ವತಿಯಿಂದ ದಸರಾ ಚಲನಚಿತ್ರೋತ್ಸವವನ್ನು ಆಯೋಜನೆ ಮಾಡಲಾಗುತ್ತಿದ್ದು, ಸೆ. 13ರಂದು ಮಾಲ್ ಆಫ್ ಮೈಸೂರು ನೆಲಮಹಡಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಲಿದೆ.
ಉದ್ಘಾಟನೆ ಕಾರ್ಯಕ್ರಮದಲ್ಲಿ ಸು ಫ್ರಮ್ ಸೋ ಖ್ಯಾತಿಯ ಸಂಧ್ಯಾ ಅರಕೆರೆ, ನಾಯಕ ನಟ ಪೃಥ್ವಿ ಅಂಬರ್, ಖ್ಯಾತ ಹಿನ್ನೆಲೆಗಾಯಕರಾದ ಜಸ್‌ಕರಣ್, ನಾಗಾರ್ಜುನ್ ಶರ್ಮಾ, ನಟ ಅಂಜಲಿ ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದ್ದಾರೆ.
ಖ್ಯಾತ ನಟಿ, ಅಭಿನಯ ಶಾರದೆ – ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ದಿವಂಗತ ಬಿ.ಸರೋಜಾದೇವಿ ಸವಿನೆನಪಿನಲ್ಲಿ ಈ ಬಾರಿಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದ್ದು, ಅವರ ಅಭಿನಯದ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಸದಭಿರುಚಿಯ ಸಾಮಾಜಿಕ ಸಂದೇಶ ನೀಡುವ ಹಾಗೂ ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳನ್ನು ಸೆ.14 ರಿಂದ 20 ವರೆಗೆ ಮಾಲ್ ಆಫ್ ಮೈಸೂರಿನ ಐನಾಕ್ಸ್ ಸಿನಿಮಾಸ್‌ನಲ್ಲಿ 3 ಪರದೆಗಳಲ್ಲಿ ಪ್ರದರ್ಶಿಸಲಾಗುವುದು. ಮಕ್ಕಳ ಚಿತ್ರಗಳು
ಹಾಗೂ ಮಹಿಳಾ ನಿರ್ದೇಶನದ ಚಿತ್ರಗಳಿಗೂ ಪ್ರಾಧಾನ್ಯತೆ ನೀಡಲಾಗಿದ್ದು, ಒಟ್ಟಾರೆ ಈ ಬಾರಿ 84 ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಚಿತ್ರ ರಸಿಕರಿಗೆ ದೊರೆಯಲಿದೆ.
ಮಾಲ್‌ಆಫ್ ಮೈಸೂರಿನಲ್ಲಿ ಸಿನಿ-ಫೋಟೋ ಪ್ರದರ್ಶನ: ಈ ಬಾರಿ ಪ್ರಗತಿ ಅಶ್ವತ ನಾರಾಯಣ್ ಅವರ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೆಶಕರುಗಳಾದ ಪುಟ್ಟಣ್ಣ ಕಣಗಾಲ್, ಎನ್ ಲಕ್ಷ್ಮೀನಾರಾಯಣ್, ಸಿದ್ದಲಿಂಗಯ್ಯ, ರವಿ ಅವರ ತೆರೆಯ ಹಿಂದಿನ ಶೈಲಿಯನ್ನು ಬಿತ್ತರಿಸುವ ಸಿನಿ ಫೋಟೋ ಪ್ರದರ್ಶನವನ್ನು ಐನಾಕ್ಸ್ ಸಿನಿಮಾಸ್ ಹೊರ ಆವರಣದಲ್ಲಿ ಸೆ. 1480 18ರವರೆಗೆ ಆಯೋಜನೆ ಮಾಡಲಾಗಿದೆ.
ಅತ್ಯುತ್ತಮ ಕಿರುಚಿತ್ರಗಳ ಪ್ರದರ್ಶನ ಯುವಜನಾಂಗಕ್ಕೆ ಪ್ರೋತ್ಸಾಹ ನೀಡಲು ಸ್ಪರ್ಧೆ ಏರ್ಪಡಿಸಲಾಗಿದ್ದು, ಆಯ್ಕೆಗೊಂಡ ಅತ್ಯುತ್ತಮ ಕಿರುಚಿತ್ರಗಳನ್ನು ಕೂಡ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುವುದು. ಸೆ.18ರಂದು ಕಿರುಚಿತ್ರಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಹಾಗೂ ಅತ್ಯುತ್ತಮ ಸಂಕಲನಕಾರ ಹಾಗೂ ಅತ್ಯುತ್ತಮ ಛಾಯಾಗ್ರಾಹಕರಿಗೂ ಬಹುಮಾನ ವಿತರಣೆ ಮಾಡಲಾಗುತ್ತದೆ.
ಸಿನಿ ರಸಿಕರಿಗೆ ಅನುಕೂಲವಾಗುವಂತೆ ಪಾಸ್ ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ 300 ರೂ. ಹಾಗೂ ಇತರರಿಗೆ 500 ರೂ.ಗಳನ್ನು ನಿಗದಿ ಪಡಿಸಲಾಗಿದ್ದು ಪಾಸ್ ಪಡೆದು ನೋಂದಾಯಿಸಿ,ಚಿತ್ರೋತ್ಸವದ 7 ದಿನಗಳೂ ಸಿನಿಮಾಗಳನ್ನು ವೀಕ್ಷಿಸಬಹುದು ಹಾಗೂ ಪಾಸ್ ಜೊತೆಯಲ್ಲಿ ಚಲನಚಿತ್ರಗಳ ಮಾಹಿತಿಯನ್ನು ಹೊಂದಿರುವ ಕಿರು ಹೊತ್ತಿಗೆಯನ್ನು ಪಡೆಯಬಹುದಾಗಿದೆ. ಸೆ.8ರಿಂದ ಮೈಸೂರಿನ ವಾರ್ತಾ ಭವನದಲ್ಲಿ ಪಾಸ್ ವಿತರಣೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ.74115 64510ನ್ನು ಸಂಪರ್ಕಿಸಬಹುದು.
ಧರ್ಮಸ್ಥಳ: ಬುರುಡೆ ವಿಡಿಯೊ ಮೊದಲಿಗೆ ಅಪ್‌ಲೋಡ್ ಮಾಡಿದ್ದ ಕೇರಳದ ಯುಟ್ಯೂಬರ್‌ಗೆ ನೋಟಿಸ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


