Friday, March 20, 2026
spot_img
More
    spot_img
    HomeJobsಉದ್ಯೋಗ ಖಾತರಿ ಯೋಜನೆ ಹೆಸರು ಬದಲಿಸಲಿದೆ ಕೇಂದ್ರ ಸರ್ಕಾರ, ಉದ್ಯೋಗ ದಿನಗಳು ಹೆಚ್ಚಳ

    ಉದ್ಯೋಗ ಖಾತರಿ ಯೋಜನೆ ಹೆಸರು ಬದಲಿಸಲಿದೆ ಕೇಂದ್ರ ಸರ್ಕಾರ, ಉದ್ಯೋಗ ದಿನಗಳು ಹೆಚ್ಚಳ

    ಉದ್ಯೋಗ ಖಾತರಿ ಅಥವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಲಿದೆ. ಕಾಂಗ್ರೆಸ್ ಪಕ್ಷದ ವಿರೋಧದ ನಡುವೆಯೇ ಈ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತ ಮಸೂದೆ ಮಂಡಿಸಲಿದೆ. ಯೋಜನೆಯಡಿ ನೀಡುವ ಉದ್ಯೋಗದ ದಿನಗಳನ್ನು ಸಹ ಏರಿಕೆ ಮಾಡಲಾಗಿದೆ.

    ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) 2005ರಲ್ಲಿ ಅಂದಿನ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿತ್ತು. 2006ರಲ್ಲಿ ಯೋಜನೆ ಜಾರಿಯಾಗಿತ್ತು. ಗ್ರಾಮೀಣ ಭಾಗದ ಬಡ ಜನರಿಗೆ ಅವರ ಗ್ರಾಮದಲ್ಲಿಯೇ ವರ್ಷದಲ್ಲಿ 100 ದಿನಗಳ ಖಾತರಿ ಉದ್ಯೋಗ ನೀಡುವ ಮೂಲಕ ಗುಳೆಯನ್ನು ತಪ್ಪಿಸುವುದು ಯೋಜನೆ ಉದ್ದೇಶವಾಗಿದೆ.

    ಈಗ ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ಬದಲಾವಣೆ ಮಾಡಲು ಹೊರಟಿದೆ. ಕೇವಲ ಹೆಸರು ಬದಲಾವಣೆ ಮಾಡುತ್ತಿಲ್ಲ. ಯೋಜನೆಯ ಸ್ವರೂಪದಲ್ಲಿಯೇ ಹಲವು ಬದಲಾವಣೆ ತರುವ ಮೂಲಕ ಪಾರದರ್ಶಕತೆ ಇರುವಂತೆ ಮಾಡಲಾಗುತ್ತದೆ. ಆದರೆ ಹೆಸರು ಬದಲಾವಣೆಗೆ ವಿರೋಧ ವ್ಯಕ್ತವಾಗಿದೆ.

    125 ದಿನಗಳ ಉದ್ಯೋಗ: ಕೇಂದ್ರ ಸರ್ಕಾರ ನರೇಗಾ ಯೋಜನೆಯನ್ನು ‘ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ)’ ಎಂದು ಬದಲಾವಣೆ ಮಾಡಲಿದೆ. ಇದರ ಸಂಕ್ಷಿಪ್ತ ಸ್ವರೂಪ ವಿಬಿ-ಜಿ ರಾಮ್‌ಜಿ ಎಂದು ಆಗಲಿದೆ. ಯೋಜನೆಯ ಹೊಸ ಸ್ವರೂಪದಲ್ಲಿ ಜನರಿಗೆ 100ರ ಬದಲು 125 ದಿನಗಳ ಉದ್ಯೋಗವನ್ನು ನೀಡುವ ಗುರಿ ಹೊಂದಲಾಗಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ 2047ರ ವಿಕಸಿತ ಭಾರತ ರಾಷ್ಟ್ರೀಯ ದೃಷ್ಟಿಕೋನದ ಭಾಗವಾಗಿ ಈ ಬದಲಾವಣೆ ಮಾಡಲಾಗುತ್ತಿದೆ. ಲೋಕಸಭೆ ವ್ಯವಹಾರಗಳ ಪಟ್ಟಿಯಲ್ಲಿ ಮಸೂದೆಯನ್ನು ಸೇರಿಸಲಾಗಿದ್ದು, ಈ ಚಳಿಗಾಲದ ಅಧಿವೇಶನದಲ್ಲಿಯೇ ಮಂಡನೆ ಮಾಡಲಾಗುತ್ತದೆ.

    ನರೇಗಾ 20 ವರ್ಷಗಳಿಂದ ಗ್ರಾಮೀಣ ಭಾಗದ ಜನರಿಗೆ 100 ದಿನಗ ಉದ್ಯೋಗ ಖಾತರಿಯನ್ನು ನೀಡುತ್ತಿದೆ. ಆದರೆ ಹೊಸ ಸ್ವರೂಪದ ಯೋಜನೆಯು ಗ್ರಾಮೀಣ ಭಾರತದ ಸಬಲೀಕರಣ, ಪಾರದರ್ಶಕತೆಯನ್ನು ಹೆಚ್ಚಳ ಮಾಡುವ ಗುರಿ ಹೊಂದಿದೆ.

    ಗ್ರಾಮೀಣ ಮೂಲ ಸೌಕರ್ಯ, ನೀರಿನ ಭದ್ರತೆ, ಜೀವನೋಪಾಯ ಸಂಬಂಧಿತ ಮೂಲ ಸೌಕರ್ಯ, ಹವಾಮಾನ ವೈಪರೀತ್ಯಗಳನ್ನು ತಗ್ಗಿಸಲು ವಿಶೇಷ ಕಾಮಗಾರಿಗಳನ್ನು ಕೈಗೊಳ್ಳಲುವುದನ್ನು ಯೋಜನೆ ಖಾತ್ರಿ ಪಡಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಯೋಜನೆ ಜಾರಿಗೊಳಿಸಲಿವೆ.

    ಈ ಉದ್ಯೋಗ ಖಾತರಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರಗಳು ಕಾಯ್ದೆ ಅನುಮೋದನೆಗೊಂಡ 6 ತಿಂಗಳ ಒಳಗೆ ಯೋಜನೆ ರೂಪಿಸಬೇಕು. ಕೇಂದ್ರ ಪ್ರತಿ ರಾಜ್ಯಕ್ಕೂ ಅನುದಾನ ಹಂಚಿಕೆ ಮಾಡಲಿದೆ. ಅನುಮೋದನೆ ಮಾಡಿದ ಅನುದಾನಕ್ಕಿಂತ ಹೆಚ್ಚು ಖರ್ಚಾದರೆ ಅದನ್ನು ರಾಜ್ಯ ಸರ್ಕಾರವೇ ನೀಡಬೇಕಿದೆ.

    ಸರ್ಕಾರ ನರೇಗಾ ಮತ್ತು ವಿಬಿ-ಜಿ ರಾಮ್‌ಜಿ ಸ್ವರೂಪದಲ್ಲಿಯೂ ಹಲವು ಬದಲಾವಣೆ ಮಾಡಲಿದೆ. ಕರಡು ಮಸೂದೆಯಲ್ಲಿ ಅವುಗಳನ್ನು ಸಹ ಉಲ್ಲೇಖಿಸಲಾಗಿದೆ.

    • ವಿಬಿ-ಜಿ ರಾಮ್‌ಜಿ ಯೋಜನೆಯಲ್ಲಿ 125 ದಿನಗಳ ಉದ್ಯೋಗ ಖಾತ್ರಿ
    • ಸ್ಥಳೀಯ ಯೋಜನೆಗಳ ಜೊತೆ ಗ್ರಾಮ ಪಂಚಾಯಿತಿಗಳ ಯೋಜನೆ ಸೇರ್ಪಡೆ
    • ರಾಜ್ಯಗಳ ಜೊತೆಗೆ 60:40ರ ಅನುಪಾತದಲ್ಲಿ ಕೂಲಿ ಹಂಚಿಕೆ
    • ಕೆಲಸ ಇಲ್ಲವಾದಲ್ಲಿ 60 ದಿನಗಳ ವಿರಾಮ ನೀಡಲು ರಾಜ್ಯಕ್ಕೆ ಅವಕಾಶ
    • ವಾರಕ್ಕೊಮ್ಮೆ ಕೂಲಿ ಪಾವತಿ, 15 ದಿನಕ್ಕೊಮ್ಮೆ ಕಡ್ಡಾಯ ಪಾವತಿ

    ಈ ವಿಬಿ-ಜಿ ರಾಮ್‌ಜಿ ಯೋಜನೆಯಿಂದ  ಬಿತ್ತನೆ ಮತ್ತು ಕೊಯ್ಲು ಸಂದರ್ಭದಲ್ಲಿ ಕೃಷಿ ಕಾರ್ಮಿಕರ ಲಭ್ಯತೆ ಹೆಚ್ಚಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

    ಆದರೆ ವಿರೋಧ ಪಕ್ಷವಾದ ಕಾಂಗ್ರೆಸ್ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹೆಸರು ಬದಲಾವಣೆ ಮಾಡಲು ವಿರೋಧ ಮಾಡುತ್ತಿದೆ. ಗ್ರಾಮೀಣ ಭಾಗದ ಕೋಟ್ಯಾಂತರ ಜನರಿಗೆ ಉದ್ಯೋಗ ನೀಡುವ ಯೋಜನೆಯನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಸೇರಿ ಕೊನೆಗೊಳಿಸಲು ಪಿತೂರಿ ನಡೆಸಿವೆ ಎಂದು ಕಾಂಗ್ರೆಸ್ ದೂರಿದೆ.

    ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ ಮಹಾತ್ಮಾ ಗಾಂಧಿಗೆ ಗೌರವ ನೀಡಲು ಯೋಜನೆಗೆ ಅವರ ಹೆಸರು ಇಡಲಾಗಿತ್ತು. ಬಿಜೆಪಿ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಗಾಂಧಿ ಹೆಸರು ಕೈ ಬಿಡುತ್ತದೆ. ನರೇಂದ್ರ ಮೋದಿ ವಿದೇಶದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುತ್ತಾರೆ. ಇದು ಇವರ ಬೂಟಾಟಿಕೆ ಎಂದು ಟೀಕಿಸಿದ್ದಾರೆ.

    ಸಂಸದೆ ಪ್ರಿಯಾಂಕಾ ವಾದ್ರಾ ಯೋಜನೆ ಹೆಸರು ಬದಲಾವಣೆ ಮಾಡುವುದು ಒಂದು ಪಿತೂರಿ. ಯೋಜನೆ ಹೆಸರು ಬದಲಾವಣೆ ಮಾಡಿದರೆ ಕಚೇರಿ, ಲೇಖನ ಸಾಮಾಗ್ರಿಗಳಲ್ಲಿ ಬದಲಾವಣ ಮಾಡಬೇಕಿದೆ. ಇದಕ್ಕೆ ಅಪಾರ ಹಣ ಖರ್ಚಾಗುತ್ತದೆ. ಭಾರತ ಮಾತ್ರವಲ್ಲ ವಿಶ್ವದ ಶ್ರೇಷ್ಠ ನಾಯಕ ಮಹಾತ್ಮ ಗಾಂಧಿ ಹೆಸರು ಬದಲಾವಣೆ ಮಾಡುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್! ದೆಹಲಿ EV ಪಾಲಿಸಿ 2.0: 2030ರವರೆಗೆ 100% ರೋಡ್ ಟ್ಯಾಕ್ಸ್ ಫ್ರೀ—₹1 ಲಕ್ಷವರೆಗೆ ಲಾಭ!

    “ದೆಹಲಿ EV ಪಾಲಿಸಿ 2.0” ಈಗ ದೇಶದ ವಾಹನ ಮಾರುಕಟ್ಟೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ದೆಹಲಿ ಸರ್ಕಾರ ಭರ್ಜರಿ ಸೌಲಭ್ಯಗಳನ್ನು ಘೋಷಿಸಿದ್ದು, ವಾಹನ ಖರೀದಿದಾರರಿಗೆ ದೊಡ್ಡ ಬೂಸ್ಟ್...

    ಬ್ರೇಕಿಂಗ್! LPG ಸಂಕಷ್ಟ: ಹೋರ್ಮುಜ್ ಅಸ್ತವ್ಯಸ್ತ—ಭಾರತ ಅಮೆರಿಕದತ್ತ ಮುಖ!

    “ಭಾರತ LPG ಸಂಕಷ್ಟ” ಈಗ ದೇಶದ ಆರ್ಥಿಕತೆ ಮತ್ತು ಸಾಮಾನ್ಯ ಜನರ ಜೀವನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಹೋರ್ಮುಜ್ ಜಲಸಂಧಿಯ ಅಸ್ತವ್ಯಸ್ತತೆ ಭಾರತಕ್ಕೆ ದೊಡ್ಡ ಹೊಡೆತ ನೀಡಿದ್ದು,...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading