ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಅಧಿವೇಶನದಲ್ಲಿ ಗದ್ದಲ, ಕೋಲಾಹಲದೊಂದಿಗೆ ಸುದೀರ್ಘ ಚರ್ಚೆ ನಡೆಯಿತು. ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ಯೂಟ್ಯೂಬರ್, ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. 13ಮಂದಿ ಸದಸ್ಯರು ತಮ್ಮ ಅಭಿಪ್ರಾಯ ಹಂಚಿಕೊಂಡ ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಉತ್ತರ ನೀಡಿದರು.
ಧರ್ಮಸ್ಥಳದಲ್ಲಿ ಇಬ್ಬರು ಯೂಟ್ಯೂಬರ್ ಗಳ ಜಗಳದ ಬಳಿಕ ಪರಸ್ಪರ ಪ್ರಕರಣ ದಾಖಲಾಗಿ, ಕೆಲವರನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮಗಳು ಹಾಕುವ ಒಂದು ಪೋಸ್ಟ್ ಲಕ್ಷಾಂತರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಲಿದೆ. ಹಾಗಾಗಿ ನೀವು ಮಾಡುವ ಪೋಸ್ಟ್ ಹಾಕುವ ಮೊದಲು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ಇಲ್ಲವೇ ಸರ್ಕಾರ ಅದನ್ನು ನಿಯಂತ್ರಿಸಬೇಕಾಗುತ್ತದೆ. ಈಗಾಗಲೇ ನಕಲಿ ಸುದ್ದಿಗಳ ನಿಯಂತ್ರಣಕ್ಕೆ ಮಸೂದೆ ತರಲು ಮುಂದಾಗಿದೆ. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.
“ನಾನು ಜವಾಬ್ದಾರಿಯಿಂದ ಉತ್ತರ ಕೊಟ್ಟಿದ್ದೇನೆ. ಧರ್ಮಸ್ಥಳ ಪ್ರಕರಣ ಕುರಿತಂತೆ ತಮ್ಮಿಂದ ಅನೇಕ ವಿಷಯಗಳನ್ನು ಸದಸ್ಯರು ನಿರೀಕ್ಷೆ ಮಾಡಿದ್ದರು. ಆದರೆ, ತನಿಖೆ ನಡೆಯುವಾಗ, ಸತ್ಯ ಹೊರತರಬೇಕು ಎಂದು ಹೊರಟಿರುವಾಗ ಕೆಲ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡುವಂತಿಲ್ಲ. ಹಾಗಾಗಿ ನಾನು ಎಚ್ಚರಿಕೆಯಿಂದಲೇ ಉತ್ತರ ಕೊಟ್ಟಿದ್ದೇನೆ. ಆಡಳಿತದಲ್ಲಿ ಲಕ್ಷ್ಮಣ ರೇಖೆಯ ಬಗ್ಗೆ ವಿರೋಧ ಪಕ್ಷಗಳ ಸದಸ್ಯರಿಗೂ ಅರಿವಿದೆ ಎಂದು ಭಾವಿಸಿದ್ದೇನೆ. ಗೌಪ್ಯತೆ ಬಗ್ಗೆ ನಾವೆಲ್ಲರೂ ಪ್ರಮಾಣ ಸ್ವೀಕರಿಸಿದ್ದೇವೆ. ಹಾಗಾಗಿ ಎಸ್‌ಐಟಿ ತನಿಖೆಯ ಕೆಲ ವಿಚಾರಗಳನ್ನು ಬಹಿರಂಗಪಡಿಸಿಲ್ಲ ಎಂದು ಹೇಳಿದರು.
ವಿಪಕ್ಷಗಳ ಸದಸ್ಯರ ಭಾವನೆಯನ್ನು ಅರ್ಥ ಮಾಡಿಕೊಂಡಿದ್ದೇನೆ. ಎಸ್‌ಐಟಿ ರಚನೆಯಲ್ಲಿ ಅಥವಾ ತನಿಖೆಯಲ್ಲಿ ನೂನ್ಯತೆಗಳಿದ್ದರೆ ಸರಿಪಡಿಸಬಹುದು. ಆದರೆ, ತನಿಖೆ ಮುಗಿಯುವವರೆಗೂ ಯಾರೂ ಹೇಳಿಕೆ ನೀಡದಿದ್ದರೆ ನಿಷ್ಪಕ್ಷಪಾತ ತನಿಖೆಗೆ ಸಹಾಯವಾಗಲಿದೆ. ಎಸ್‌ಐಟಿ ತನಿಖೆ ಶೀಘ್ರವಾಗಿ ಮುಗಿದು, ವರದಿ ಬರಬಹುದು. ಅಲ್ಲಿಯವರೆಗೆ ಯಾರೂ ಕೂಡ ಪ್ರತಿಕ್ರಿಯೆ ಕೊಡುವುದು ಬೇಡ ಎಂದು ಮನವಿ ಮಾಡಿದರು.
ಕೆಲ ಸದಸ್ಯರು ಯುಟ್ಯೂಬರ್‌ಗಳ ಬಗ್ಗೆ ಪ್ರಸ್ತಾಪ ಮಾಡಿದ್ದೀರಿ. ವ್ಯಕ್ತಿ, ಸಂಸ್ಥೆ, ಸರ್ಕಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡುತ್ತಿರುವುದನ್ನು ನಾವೂ ಗಮನಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಸಮಾಜದ ಸ್ವಾಸ್ಥ್ಯ ಹಾಳಾಗಲಿದೆ ಎಂಬುದು ಸರ್ಕಾರಕ್ಕೂ ಅರ್ಥವಾಗಿದೆ. ತನಿಖೆ ಪ್ರಾರಂಭದಿಂದಲೂ ಏನೆಲ್ಲಾ ಆಗಿದೆ ಎಂಬುದನ್ನು ಗಮನಿಸಿದ್ದೇವೆ. ಇಷ್ಟು ದಿನ ಏನಾಗಿದೆಯೋ ಅದನ್ನು ಇಲ್ಲಿಗೇ ನಿಲ್ಲಿಸಿ, ಮುಂದುವರಿಸಿದರೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.
,ಧರ್ಮಸ್ಥಳ: ಅಸ್ತಿಪಂಜರ ಸಿಕ್ಕಿದ್ಯಾ ಇಲ್ವಾ? ಅನಾಮಿಕ ಹೇಳಿದ್ದು ಸುಳ್ಳಾ? ಸದನದಲ್ಲಿ ಉತ್ತರಿಸಿದ ಪರಮೇಶ್ವರ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


