ಬೆಂಗಳೂರು ನಗರದ 7ಕ್ಕೂ ಅಧಿಕ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಗುಜರಾತ್ ಮೂಲದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್. ಆದರೆ ಈ ಬೆದರಿಕೆ ಪ್ರಕರಣದ ಹಿಂದೆ ಲವ್ ಫೆಲ್ಯೂರ್ ಸ್ಟೋರಿ ಇದೆ.
ಬಂಧಿತ ಆರೋಪಿಯನ್ನು ರೆನೆ ಜೋಶಿಲ್ದಾ ಎಂದು ಗುರುತಿಸಲಾಗಿದೆ. ಸೈಬರ್ ಕ್ರೈಂ ಪೊಲೀಸರು ಆರೋಪಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಈಕೆ ಚೆನ್ನೈ, ಹೈದರಾಬಾದ್, ಪಂಜಾಬ್, ಗುಜರಾತ್‌ನ ಶಾಲೆಗಳಿಗೆ ಸಹ ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದಳು.
ರೆನೆ ಜೋಶಿಲ್ದಾ ತಾನು ಪ್ರೀತಿಸುತ್ತಿದ್ದ ಯುವಕನ ಮೇಲೆ ಸೇಡು ತೀರಿಸಿಕೊಳ್ಳಲು, ಆತನನನ್ನು ಸಿಕ್ಕಿಹಾಕಿಸಲು ಆತನ ಮೊಬೈಲ್ ನಂಬರ್ ಬಳಕೆ ಮಾಡಿಕೊಂಡು ಬೆದರಿಕೆಗಳನ್ನು ಕಳಿಸುತ್ತಿದ್ದಳು. ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಸದ್ಯ ರೆನೆ ಜೋಶಿಲ್ದಾ ಬಂಧಿಸಿದ್ದಾರೆ.
ಆರೋಪಿ ರೋಬೋಟಿಕ್ ಇಂಜಿನಿಯರ್ ಆಗಿದ್ದು, ರೆನೆ ಜೋಶಿಲ್ದಾ ವಿಪಿಎನ್ ಬಳಸಿ ಬೆದರಿಕೆ ಇ-ಮೇಲ್ ಕಳುಹಿಸಿರುವುದು ಪತ್ತೆಯಾಗಿದೆ. ಗೇಟ್ ಕೋಡ್ ಎಂಬ ಅಪ್ಲಿಕೇಷನ್ ಮೂಲಕ ತಾನು ಪ್ರೀತಿಸುತ್ತಿದ್ದ ಯವಕನ ಮೊಬೈಲ್ ನಂಬರ್ ಪಡೆದು ಕೃತ್ಯ ಎಸಗಿದ್ದಾಳೆ.
11 ರಾಜ್ಯಗಳಿಗೆ ಬೆದರಿಕೆ ಸಂದೇಶ: 30 ವರ್ಷದ ರೆನೆ ಜೋಶಿಲ್ದಾ ಮೂಲತಃ ಗುಜರಾತ್ ರಾಜ್ಯದವಳು. ಬೆಂಗಳೂರಿನ 7 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಳು. ಆದರೆ ಪೊಲೀಸರ ತನಿಖೆಯಲ್ಲಿ ಆಕೆ ಚೆನ್ನೈ, ಹೈದರಾಬಾದ್, ಗುಜರಾತ್, ಪಂಜಾಬ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಹರ್ಯಾಣ ಸೇರಿದಂತೆ 11 ರಾಜ್ಯಗಳ ವಿವಿಧ ಶೈಕ್ಷಣಿಕ ಸಂಸ್ಥೆಗಳಿಗೆ ಸಹ ಈ ರೀತಿಯ ಬೆದರಿಕೆಗಳನ್ನು ಕಳುಹಿಸಿರುವುದು ಪತ್ತೆಯಾಗಿದೆ.
ತನ್ನ ಲೋಕೇಷನ್ ತಿಳಿಯದಂತೆ ಮಾಡಲು ರೆನೆ ಜೋಶಿಲ್ದಾ VPN ಸೇವೆ ಬಳಸಿದ್ದಳು ಮತ್ತು Gate Code ಎಂಬ ಅಪ್ಲಿಕೇಶನ್ ಮೂಲಕ ಸೃಷ್ಟಿಸಲಾದ ವರ್ಚುವಲ್ ಮೊಬೈಲ್ ಸಂಖ್ಯೆಯ ಮೂಲಕ ಇಮೇಲ್‌ಗಳನ್ನು ಕಳುಹಿಸಿದ್ದಳು. 6-7 ವಾಟ್ಸಾಪ್ ಖಾತೆಗಳನ್ನು ಬೇರೆ ಬೇರೆ ಹೆಸರಿನಲ್ಲಿ ಸೃಷ್ಟಿಸಿ, ಈ ನಕಲಿ ಬೆದರಿಕೆ ಸಂದೇಶಗಳನ್ನು ರಚಿಸಿ, ಕಳಿಸುತ್ತಿದ್ದಳು.
ರೆನೆ ಜೋಶಿಲ್ದಾ ಪ್ರಭಾಕರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಪ್ರೀತಿ ನಿರಾಕರಿಸಿದ್ದ ಆತ 2025ರ ಫೆಬ್ರವರಿಯಲ್ಲಿ ಬೇರೆ ವಿವಾಹವಾಗಿದ್ದ. ಆದ್ದರಿಂದ ರೆನೆ ಜೋಶಿಲ್ದಾ ಕೋಪದಿಂದ ಪ್ರಭಾಕರ್ ಹೆಸರಿನಲ್ಲಿ ಈ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿ ಅವನನ್ನು ಸಿಕ್ಕಿಸಲು ಪ್ರಯತ್ನ ಮಾಡಿದ್ದಳು.
ಪೊಲೀಸರ ಮಾಹಿತಿ ಪ್ರಕಾರ ರೆನೆ ಜೋಶಿಲ್ದಾ 21 ನಕಲಿ ಬಾಂಬ್ ಬೆದರಿಕೆ ಸಂದೇಶಗಳನ್ನು ಗುಜರಾತ್‌ನಲ್ಲಿ ಮತ್ತು 7 ಬೆಂಗಳೂರಿನ ಶಾಲೆಗಳಿಗೆ ಇಂತಹ ಸಂದೇಶಗಳನ್ನು ಕಳುಹಿಸಿದ್ದಾಳೆ. ಶಾಲೆಗಳಲ್ಲಿ ಸಂದೇಶದ ಬಳಿಕ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ತಪಾಸಣೆ ಬಳಿಕ ಇದು ನಕಲಿ ಸಂದೇಶ ಎಂದು ತಿಳಿದುಬಂದಿತ್ತು.
ಆಕೆ ಒಂದು ಇ-ಮೇಲ್‌ನಲ್ಲಿ ತಾನು ಅಹಮದಾಬಾದ್-ಲಂಡನ್ ವಿಮಾನವನ್ನು ಸ್ಫೋಟಿಸಿದ್ದೇನೆ ಎಂದು ಸಹ ಬರೆದು ಕಳಿಸಿದ್ದಳು. ಗುಜರಾತ್ ಶಾಲೆಗೆ ಕಳಿಸಿದ್ದ ಸಂದೇಶದಲ್ಲಿ, “ನಾನು ನಮ್ಮ ಮಾಜಿ ಸಿಎಂ ವಿಜಯ್ ರೂಪಾನಿ ಇದ್ದ ಏರ್ ಇಂಡಿಯಾ ವಿಮಾನವನ್ನು ಪತನಗೊಳಿಸಿದ್ದೇನೆ. ನಿಮಗೆ ಗೊತ್ತಾಗುತ್ತದೆ, ನಾವು ಕೇವಲ ಆಟವಾಡುತ್ತಿಲ್ಲ” ಎಂದು ಬೆದರಿಸಿದ್ದಳು.
ಬೆಂಗಳೂರು ನಗರದ ಶಾಲೆಗಳಿಗೆ ಬೆದರಿಕೆಗಳು ಬಂದ ಕಾರಣಕ್ಕೆ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆಗೆ ಸೂಚಿಸಿದ್ದರು. ಈ ತಂಡ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ ನೇತೃತ್ವದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಚೆನ್ನೈ ಪೊಲೀಸರು ರೆನೆ ಜೋಶಿಲ್ದಾರನ್ನು ಇದೇ ಮಾದರಿ ಬೆದರಿಕೆ ಸಂದೇಶಗಳನ್ನು ಕಳಿಸಿದ ಕಾರಣಕ್ಕೆ ಬಂಧಿಸಿದ್ದರು. ಈಗ ಚೆನ್ನೈ, ಬೆಂಗಳೂರು ಪೊಲೀಸರು ಜಂಟಿಯಾಗಿ ತನಿಖೆ ಕೈಗೊಂಡಿದ್ದಾರೆ.
ಸದ್ಯ ರೆನೆ ಜೋಶಿಲ್ದಾ ಅಹಮದಾಬಾದ್ ಜೈಲಿನಲ್ಲಿದ್ದಾಳೆ. ಬಾಡಿ ವಾರಂಟ್ ಮೂಲಕ ಆಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೂನ್‌ನಲ್ಲಿ ಆಕೆ ಅಹಮದಾಬಾದ್ ಮತ್ತು ಅದರ ಸುತ್ತಮುತ್ತಲಿನ 21 ಸ್ಥಳಗಳನ್ನು, ನರೇಂದ್ರ ಮೋದಿ ಕ್ರೀಡಾಂಗಣ ಸ್ಫೋಟಗೊಳಿಸುವ ಬೆದರಿಕೆ ಸಂದೇಶ ಕಳಿಸಿದ ಕಾರಣಕ್ಕೆ ಬಂಧಿಸಲಾಗಿದ್ದು, ಜೈಲಿನಲ್ಲಿದ್ದಾಳೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


