ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಐದನೇ ಟಿ20 ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 231 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 232 ರನ್ ಗುರಿ ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ದಕ್ಷಿಣ ಆಫ್ರಿಕಾ ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದು 63 ರನ್ ಜತೆಯಾಟವಾಡಿ ಉತ್ತಮ ಆರಂಭ ಮಾಡಿಕೊಟ್ಟರು. ಸ್ಯಾಮ್ಸನ್ 37 ರನ್ ಬಾರಿಸಿದರೆ, ಅಭಿಷೇಕ್ ಶರ್ಮಾ 34 ರನ್ ಬಾರಿಸಿದರು.
ಇನ್ನು ನಾಯಕ ಸೂರ್ಯಕುಮಾರ್ ಯಾದವ್ 5 ರನ್ ಗಳಿಸಿ ಮತ್ತೊಮ್ಮೆ ನೆಲಕಚ್ಚಿದರು. ಬಳಿಕ ನಾಲ್ಕನೇ ವಿಕೆಟ್ ಗೆ ಜತೆಯಾದ ತಿಲಕ್ ವರ್ಮಾ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರಿಸಿ 105 ರನ್ ಜತೆಯಾಟವಾಡಿದರು. ತಿಲಕ್ ವರ್ಮಾ 42 ಎಸೆತಗಳಲ್ಲಿ 73 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 25 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 63 ರನ್ ಚಚ್ಚಿದರು. ಇನ್ನುಳಿದಂತೆ ಶಿವಮ್ ದುಬೆ 3 ಎಸೆತಗಳಲ್ಲಿ ಅಜೇಯ 10 ರನ್ ಹಾಗೂ ಯಾವುದೇ ಎಸೆತ ಎದುರಿಸದ ಜಿತೇಶ್ ಶರ್ಮಾ ಅಜೇಯರಾಗಿ ಉಳಿದರು.
ದಕ್ಷಿಣ ಆಫ್ರಿಕಾ ಪರ ಕಾರ್ಬಿನ್ ಬಾಷ್ 2 ವಿಕೆಟ್, ಬಾರ್ಟ್ ಮನ್ ಹಾಗೂ ಜಾರ್ಜ್ ಲಿಂಡೆ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


