ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾರತ್ತಹಳ್ಳಿ ಸೇತುವೆ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪ್ರಾಯೋಗಿಕ ವ್ಯವಸ್ಥೆಯೊಂದನ್ನು ಮಾಡಿದ್ದಾರೆ. ಈ ಹೊಸ ಸಂಚಾರ ಬದಲಾವಣೆ ವ್ಯವಸ್ಥೆ ಡಿಸೆಂಬರ್ 22ರಿಂದ ಜಾರಿಗೆ ಬಂದಿದೆ. ಸುಗಮ ಪ್ರಯಾಣ ಪೊಲೀಸರ ಜೊತೆ ಸಹಕರಿಸಿ ಎಂದು ಮನವಿ ಮಾಡಲಾಗಿದೆ.
ಈ ಕುರಿತು ಸಾಹಿಲ್ ಬಾಗ್ಲಾ,ಉಪ ಪೊಲೀಸ್ ಆಯುಕ್ತರು, ಸಂಚಾರ ಪೂರ್ವ ವಿಭಾಗ ಬೆಂಗಳೂರು ನಗರ ಆದೇಶವನ್ನು ಹೊರಡಿಸಿದ್ದಾರೆ. ಹೆಚ್.ಎ.ಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಮಾರತ್ತಹಳ್ಳಿ ಬ್ರಿಡ್ಜ್ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಂಬಂಧ ದಿನಾಂಕ 22.12.2025 ರಿಂದ ಪ್ರಾಯೋಗಿಕವಾಗಿ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಕಂಡ ಸಂಚಾರ ಮಾರ್ಪಾಡು ಮಾಡಲಾಗಿರುತ್ತದೆ ಎಂದು ಹೇಳಿದ್ದಾರೆ.
ವಾಹನ ಸಂಚಾರ ನಿರ್ಬಂಧಿಸಲಾದ ರಸ್ತೆ ಮಾರ್ಗ
* ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ ಕಡೆಯಿಂದ ಕೆ.ಎಂ.ಎಲ್ ಮಾಲ್ ಸರ್ವಿಸ್ ರಸ್ತೆಯ ಮುಖಾಂತರ ಸಂಚರಿಸಿ ಮಾರತ್ತಹಳ್ಳಿ, ಬ್ರಿಡ್ಜ್ ಜಂಕ್ಷನ್ ಬಳಿ ಬಲ ತಿರುವು ಪಡೆದುಕೊಂಡು ವರ್ತೂರು ಮತ್ತು ವೈಟ್‌ಫೀಲ್ಡ್ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
* ತುಳಸಿ ಥಿಯೇಟರ್ ಜಂಕ್ಷನ್‌ನಲ್ಲಿರುವ ಮೀಡಿಯನ್ ಅನ್ನು ಮುಚ್ಚಲಾಗುವುದು.
* ಮಾರತ್ತಹಳ್ಳಿ ಕಡೆಯಿಂದ ಬರುವ ವಾಹನಗಳು ದೊಡ್ಡನೆಕ್ಕುಂದಿ ಜಂಕ್ಷನ್‌ನಲ್ಲಿ ಯು ತಿರುವು ಪಡೆಯುವುದನ್ನು ನಿರ್ಬಂಧಿಸಲಾಗಿರುತ್ತದೆ.
ಪರ್ಯಾಯ ಮಾರ್ಗ
* ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ ಕಡೆಯಿಂದ ವರ್ತೂರು ಮತ್ತು ಕುಂದಲಹಳ್ಳಿ ಕಡೆಗೆ ಸಂಚರಿಸುವ ವಾಹನಗಳು ಹೊರವರ್ತುಲ ರಸ್ತೆಯ ಮುಖಾಂತರ ಸಂಚರಿಸಿ ಕಾರ್ತಿಕ್ ನಗರ ಜಂಕ್ಷನ್ ಬಳಿ ಯು ತಿರುವು ಪಡೆದುಕೊಂಡು ಕಲಾಮಂದಿರ ಸರ್ವಿಸ್ ರಸ್ತೆಯ ಮುಖಾಂತರ ವರ್ತೂರು ಮುಖ್ಯ ರಸ್ತೆ ತಲುಪಿ ವೈಟ್‌ಫೀಲ್ಡ್ ಮತ್ತು ವರ್ತೂರು ಕಡೆಗೆ ಸಂಚರಿಸಬಹುದಾಗಿದೆ.
* ಮಾರತಹಳ್ಳಿ, ಕುಂದಲಹಳ್ಳಿ ಕಡೆಯಿಂದ ಕೆ.ಆರ್. ಪುರಂಗೆ ಹೋಗುವ ವಾಹನಗಳು ದೊಡ್ಡನೆಕುಂದಿ ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ದೊಡ್ಡೆನೆಕುಂದಿ ಮುಖ್ಯರಸ್ತೆ ಮೂಲಕ ಕಾರ್ತಿಕ್ ನಗರ ಜಂಕ್ಷನ್ ಕಡೆಗೆ ಸಾಗಿ ಹೊರ ವರ್ತುಲ ರಸ್ತೆಯಲ್ಲಿ ಮುಂದುವರಿಯಬಹುದು.
ಮಾರತ್ತಹಳ್ಳಿ ಬ್ರಿಡ್ಜ್ ಬೆಂಗಳೂರು ನಗರದ ಹೊರ ವರ್ತುಲ ರಸ್ತೆಯ ಪ್ರದೇಶವಾಗಿದೆ. ವೈಟ್‌ಫೀಲ್ಡ್, ಕೆ.ಆರ್.ಪುರ, ಸರ್ಜಾಪುರ ರಸ್ತೆ ಮತ್ತು ಹೆಚ್‌ಎಎಲ್ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಭಾರೀ ಸಂಚಾರ ದಟ್ಟಣೆಗೆ ಇದು ಹೆಸರುವಾಸಿ. ಇಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಸಂಚಾರಿ ಪೊಲೀಸರು ಆಗಾಗ ಹೊಸ ಪ್ರಯೋಗವನ್ನು ಮಾಡುತ್ತಾರೆ.
ಕೆಲವು ದಿನಗಳ ಹಿಂದೆ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ, ಹಿರಿಯ ಅಧಿಕಾರಿಗಳು ದೇವರಬೀಸನಹಳ್ಳಿ ಜಂಕ್ಷನ್ ಮತ್ತು ಮಾರತ್ತಹಳ್ಳಿ ಬ್ರಿಡ್ಜ್ ಜಂಕ್ಷನ್‌ಗೆ ಪೀಕ್ ಅವರ್‌ನಲ್ಲಿ ಭೇಟಿ ನೀಡಿ ಪರಿಶೀಲಿಸಿ, ಜಂಕ್ಷನ್ ಸುತ್ತಮುತ್ತಲಿನ ರಸ್ತೆಗಳ ಬದಿಯಲ್ಲಿ ವಾಹನಗಳ ಅನಧಿಕೃತ ನಿಲುಗಡೆ ಆಗದಂತೆ ಕ್ರಮ ವಹಿಸಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಕೈಗೊಂಡಿರುವ ಮತ್ತು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡಿದ್ದರು.
ಈ ಸೂಚನೆಯ ಮೇರೆಗೆ ಈಗ ಸಂಚಾರ ಮಾರ್ಗದಲ್ಲಿ ಕೆಲವು ಬದಲಾವಣೆಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ. ಈ ಪ್ರಾಯೋಗಿಕ ಬದಲಾವಣೆ ಯಶಸ್ವಿಯಾದರೆ ಶಾಶ್ವತವಾಗಿ ವಾಹನ ಸಂಚಾರದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


