ಸಾಮಾಜಿಕ ಜಾಲತಾಣವಿಲ್ಲದೇ ಬದುಕಿಲ್ಲ ಎಂಬ ಹಂತಕ್ಕೆ ಹಲವಾರು ಜನರು ಬಂದು ಬಿಟ್ಟಿದ್ದಾರೆ. ಲೈಕ್ಸ್, ಫಾಲೋವರ್ಸ್‌ಗಾಗಿ ಏನೇನೋ ಹುಚ್ಚಾಟಗಳನ್ನು ಮಾಡುತ್ತಾರೆ. ಭಾರತದ ಪಕ್ಕದ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ಬಂದ್ ಮಾಡಿದ್ದು Gen-Zಗಳ ಸಿಟ್ಟಿಗೆ ಕಾರಣವಾಗಿ ದೊಡ್ಡ ಹೋರಾಟ ನಡೆದು ಸರ್ಕಾರವೇ ಪತನಗೊಂಡಿತು.
ಆದರೆ ಈಗ ಆಸ್ಟ್ರೇಲಿಯಾದಲ್ಲಿ ಕೋಟ್ಯಾಂತರ Gen-Zಗಳು ಸೋಶಿಯಲ್ ಮೀಡಿಯಾದಿಂದ ದೂರವಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಹ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಆಸ್ಟ್ರೇಲಿಯಾ ಸರ್ಕಾರ 16 ವರ್ಷದೊಳಗಿನವರು ಸಾಮಾಜಿಕ ಜಾಲತಾಣ ಬಳಕೆ ಮಾಡದಂತೆ ಹೊಸ ಕಾನೂನು ಜಾರಿಗೊಳಿಸಿದೆ. ಮಂಗಳವಾರದಿಂದ ಈ ಕಾನೂನು ಜಾರಿಗೆ ಬಂದಿದ್ದು, ಕೋಟ್ಯಾಂತರ Gen-Zಗಳು ತಮ್ಮ ಖಾತೆ ಬಳಕೆ ಮಾಡಲು ಆಗುತ್ತಿಲ್ಲ.
ಫೇಸ್‌ಬುಕ್, ಯೂಟ್ಯೂಬ್, ಇನ್ಸ್‌ಸ್ಟಾಗ್ರಾಮ್, ಟಿಕ್‌ಟಾಕ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳನ್ನು 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಬಳಕೆ ಮಾಡುವಂತಿಲ್ಲ. ಮೆಟಾ ದೇಶದಲ್ಲಿ 16ಕ್ಕಿಂತ ಕಡಿಮೆ ವಯೋಮಾನದವರ ಖಾತೆಯನ್ನು ಸ್ಥಗಿತಗೊಳಿಸಿದೆ.
ವಾಟ್ಸಪ್, ಮೆಸೇಂಜರ್ ಸೇರಿದಂತೆ ಕೆಲವು ಅಪ್ಲಿಕೇಶನ್‌ನಗಳಿಗೆ ಈ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ. ಒಂದು ವೇಳೆ ಸರ್ಕಾರದ ಕಠಿಣ ನಿಯಮ ಉಲ್ಲಂಘನೆ ಮಾಡಿ 16ಕ್ಕಿಂತ ಕಡಿಮೆ ವಯೋಮಾನದವರಿಗೆ ಖಾತೆ ಬಳಕೆಗೆ ಅವಕಾಶ ಕೊಟ್ಟರೆ ಅವುಗಳಿಗೆ 288 ಕೋಟಿ ರೂ. ದಂಡವನ್ನು ವಿಧಿಸಲು ಸಹ ಅವಕಾಶವಿದೆ.
ಮೊದಲ ದೇಶ ಆಸ್ಟ್ರೇಲಿಯಾ: ಡಿಸೆಂಬರ್ 10ರಿಂದಲೇ ಜಾರಿಗೆ ಬರುವಂತೆ ಆಸ್ಟ್ರೇಲಿಯಾ ಹೊಸ ಕಾನೂನನ್ನು ಜಾರಿಗೆ ತಂದಿದೆ. Gen-Zಗಳಿಗೆ ಅಥವ ಅಪ್ರಾಪ್ತರಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿಷೇಧ ಹೇರಿದ ವಿಶ್ವದ ಮೊದಲ ದೇಶ ಆಸ್ಟ್ರೇಲಿಯಾ.
ಹೊಸ ನಿಯಮದ ಪ್ರಕಾರ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್, ಯೂಟ್ಯೂಬ್, ಸ್ನಾಪ್‌ಚಾಟ್, ರೆಡ್ಡಿಟ್, ಎಕ್ಸ್, ಥ್ರೆಡ್ಸ್, ಟ್ವಿಚ್ ಮತ್ತು ಕಿಕ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣಗಳು ಈಗ 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಖಾತೆಗಳನ್ನು ತೆಗೆದುಹಾಕಬೇಕಿದೆ.
ಹೊಸ ಸೈನ್-ಅಪ್‌ಗಳನ್ನು ನಿರ್ಬಂಧಿಸಬೇಕು. ನಿಯಮಗಳನ್ನು ಪಾಲಿಸದ ಕಂಪನಿಗಳು ಗರಿಷ್ಠ ದಂಡ ಪಾವತಿ ಮಾಡುವ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಈ ಕಾನೂನು ಯುವಜನರನ್ನು ಹಾನಿಕಾರಕ ವಿಷಯಗಳಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಸರ್ಕಾರ ಹೇಳಿದೆ. ಆದರೆ ಈ ಕಾನೂನಿನ ಕುರಿತು ಟೀಕೆಗಳು ಸಹ ವ್ಯಕ್ತವಾಗುತ್ತಿದೆ.
ಪ್ರಧಾನಿ ಆಂಥೋನಿ ಅಲ್ಬನೀಸ್ ವಾರಾಂತ್ಯದ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, “ನಾವು ಆರಂಭದಿಂದಲೂ ಹೇಳಿದ್ದೇವೆ. ಈ ಪ್ರಕ್ರಿಯೆ ಪರಿಪೂರ್ಣವಾಗಿರುವುದಿಲ್ಲ. ಆದರೆ ಈ ಕಾನೂನು ಕಳುಹಿಸುವ ಸಂದೇಶವು ಸ್ಪಷ್ಟವಾಗಿರುತ್ತದೆ” ಎಂದು ಹೇಳಿದ್ದರು.
ಪೋಷಕರ ಪ್ರಕಾರ ಮಕ್ಕಳ ವಯೋಮಿತಿಯನ್ನು ಎಲ್ಲಾ ಅಪ್ಲಿಕೇಶನ್‌ಗಳು ಪೋಷಕರನ್ನು ಸಂಪರ್ಕಿಸುವ ಮೂಲಕ ಖಚಿತಪಡಿಸಿಕೊಳ್ಳುತ್ತಿವೆ. ಅವರು 16 ವರ್ಷಕ್ಕಿಂತ ಕಡಿಮೆ ವಯೋಮಿತಿ ಅವರು ಆಗಿದ್ದರೆ ಅವರ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ.
“ನನ್ನ ಮಗಳಿಗೆ 15 ವರ್ಷ. ಅವಳು ಸ್ನಾಪ್‌ಚಾಟ್ ಮೂಲಕ 18 ವರ್ಷದ ಸ್ನೇಹಿತರ ಗುಂಪು ಮಾಡಿಕೊಂಡಿದ್ದಳು. ಅವರ ಜೊತೆ ಚಾಟಿಂಗ್ ಮಾಡುತ್ತಿದ್ದಳು. ಆದರೆ ಈಗ ಆಕೆಯ ಖಾತೆ ಬ್ಲಾಕ್ ಆಗಿದ್ದು, ಅವಳು ಆಕ್ರೋಶಗೊಂಡಿದ್ದಾಳೆ” ಎಂದು ಪೋಷಕರೊಬ್ಬರು ಹೇಳಿದ್ದಾರೆ.
ಸರ್ಕಾರ ಸಹ ಎಲ್ಲಾ ಸಾಮಾಜಿಕ ಜಾಲತಾಣಗಳು ತೆಗೆದುಹಾಕಿದ ಖಾತೆಗಳ ಸಂಖ್ಯೆ ಮತ್ತು ಅವುಗಳು ಎದುರಿಸುತ್ತಿರುವ ಸವಾಲುಗಳ ವಿವರಗಳನ್ನು ನೀಡುವಂತೆ ಕೇಳಿದೆ. ಈ ಕಾನೂನಿಯ ಪ್ರಯೋಜನಗಳು ಮತ್ತು ಪರಿಣಾಮಗಳನ್ನು ಕಾಲ ಕಾಲಕ್ಕೆ ಸರ್ಕಾರ ಪರಿಶೀಲನೆ ಮಾಡಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


