ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್) ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ಆಯೋಜನೆ ಮಾಡುವ ವಿಚಾರ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. ಈ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಸಹ ಅರ್ಜಿ ಸಲ್ಲಿಕೆಯಾಗಿತ್ತು. ಈಗ ಬೆಳಗಾವಿ ಅಧಿವೇಶನದಲ್ಲಿಯೂ ಈ ಚರ್ಚೆ ಮುಂದುವರೆದಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ವಿಧಾನಸಭೆಯಲ್ಲಿ ಕಾರ್ಕಳದ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್ ಗೃಹ ಸಚಿವರಿಗೆ ಆರ್‌ಎಸ್‌ಎಸ್ ಪಥ ಸಂಚಲನದ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದರು.
ಶಾಸಕರು ರಾಜ್ಯದಲ್ಲಿ 2025ನೇ ವರ್ಷದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್) ವತಿಯಿಂದ ಪಥಸಂಚಲನ ಕಾರ್ಯಕ್ರಮಗಳು ನಡೆದಿದೆಯೇ? ಎಂದು ಪ್ರಶ್ನೆ ಮಾಡಿದ್ದರು. ಗೃಹ ಸಚಿವರು ಹೌದು ನಡೆದಿದೆ ಎಂದು ಉತ್ತರ ನೀಡಿದ್ದಾರೆ.
ಹಾಗಿದ್ದಲ್ಲಿ ಎಷ್ಟು ಸ್ಥಳಗಳಲ್ಲಿ ಈ ಪಥಸಂಚಲನ ಕಾರ್ಯಕ್ರಮಗಳು ನಡೆದಿವೆ. ಈ ಪಥಸಂಚಲನದಲ್ಲಿ ಪಾಲ್ಗೊಂಡ ಸ್ವಯಂ ಸೇವಕರ ಸಂಖ್ಯೆ ಎಷ್ಟು, (ಜಿಲ್ಲಾವಾರು, ಸ್ಥಳವಾರು ವಿವರಗಳನ್ನು ನೀಡುವುದು) ಎಂದು ಶಾಸಕರು ಪ್ರಶ್ನೆ ಮಾಡಿದ್ದರು.
ಗೃಹ ಸಚಿವರು ತಮ್ಮ ಉತ್ತರದಲ್ಲಿ ರಾಜ್ಯದ ಒಟ್ಟು 518 ಸ್ಥಳಗಳಲ್ಲಿ ರಾಷ್ಟ್ರೀಯ ಪಥಸಂಚಲನ ಕಾರ್ಯಕ್ರಮಗಳು ನಡೆದಿವೆ. ಸದರಿ ಪಥಸಂಚಲನದಲ್ಲಿ ಪಾಲ್ಗೊಂಡ ಜಿಲ್ಲಾವಾರು ಸ್ವಯಂ ಸೇವಕರ ಸಂಖ್ಯೆಯನ್ನು ನೀಡಿದ್ದಾರೆ.
ಶಾಸಕರು ಇದುವರೆಗೂ ನಡೆದಿರುವ ಈ ಪಥಸಂಚಲನ ಸಂದರ್ಭದಲ್ಲಿ ಗಲಾಟೆ, ದೊಂಬಿಗಳು, ಕೋಮುಗಲಭೆಗಳು ನಡೆದಿದೆಯೇ? ವಿವರ ನೀಡುವುದು ಎಂದು ಪ್ರಶ್ನೆ ಮಾಡಿದ್ದರು. ಸಚಿವರು ಇದುವರೆಗೂ ನಡೆದಿರುವ ಈ ಪಥಸಂಚನ ಸಂದರ್ಭದಲ್ಲಿ ಯಾವುದೇ ಗಲಾಟೆ, ದೊಂಬಿಗಳು, ಕೋಮುಗಲಭೆಗಳು ನಡೆದಿರುವುದಿಲ್ಲ ಎಂದು ಹೇಳಿದ್ದಾರೆ.
ಎಲ್ಲಿ, ಎಷ್ಟು ಪಥಸಂಚಲನ?; ಗೃಹ ಸಚಿವರ ಮಾಹಿತಿ ಪ್ರಕಾರ ಬೆಂಗಳೂರು ನಗರ 97, ಮೈಸೂರು ನಗರ 4, ಹುಬ್ಬಳ್ಳಿ-ಧಾರವಾಡ ನಗರ 2, ಮಂಗಳೂರು ನಗರ 6, ಬೆಳಗಾವಿ ನಗರ 3, ಕಲಬುರಗಿ ನಗರ 4, ಬೆಂಗಳೂರು ಜಿಲ್ಲೆ 13, ತುಮಕೂರು ಜಿಲ್ಲೆ 11, ಕೋಲಾರ ಜಿಲ್ಲೆ 5, ಕೆಜಿಎಫ್ 2 ಪಥ ಸಂಚಲನ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆ 9, ಚಿಕ್ಕಬಳ್ಳಾಪುರ 5, ಮೈಸೂರು ಜಿಲ್ಲೆ 4, ಚಾಮರಾಜನಗರ ಜಿಲ್ಲೆ 3, ಹಾಸನ ಜಿಲ್ಲೆ 8, ಕೊಡಗು ಜಿಲ್ಲೆ 2, ಮಂಡ್ಯ ಜಿಲ್ಲೆ 8, ದಾವಣಗೆರೆ ಜಿಲ್ಲೆ 7, ಶಿವಮೊಗ್ಗ ಜಿಲ್ಲೆ 19, ಚಿತ್ರದುರ್ಗ ಜಿಲ್ಲೆ 11, ಹಾವೇರಿ ಜಿಲ್ಲೆ 5, ಮಂಗಳೂರು ಜಿಲ್ಲೆ 10, ಕಾರವಾರ ಜಿಲ್ಲೆ 45, ಉಡುಪಿ ಜಿಲ್ಲೆ 10 ಮತ್ತು ಚಿಕ್ಕಮಗಳೂರು ಜಿಲ್ಲೆ 11 ಪಥಸಂಚಲನ ನಡೆದಿದೆ.
ಐಟಿ-ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಆರ್‌ಎಸ್‌ಎಸ್ ನಡುವಿನ ಜಟಾಪಟಿ ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಸರ್ಕಾರಿ ಶಾಲೆ, ಆಸ್ತಿಗಳ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸಿ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದರು.
ಸಚಿವರು ಆರ್‌ಎಸ್‌ಎಸ್ ನೋಂದಾಯಿತ ಸಂಸ್ಥೆಯಲ್ಲ ಎಂದು ಹೇಳಿಕೆ ನೀಡಿದ್ದರು. ಆರ್‌ಎಸ್‌ಎಸ್‌ಗೆ ಬರುವ ದೇಣಿಗೆ ಬಗ್ಗೆ ಪ್ರಶ್ನೆ ಮಾಡಿದ್ದರು. ಆದ್ದರಿಂದ ಕರ್ನಾಟಕದ ಬಿಜೆಪಿ ನಾಯಕರು, ಸಚಿವರ ನಡುವೆ ವಾಕ್ಸಮರ ನಡೆದಿತ್ತು.
ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಆರ್ಎಸ್ಎಸ್ ಪಥಸಂಚಲನ ನಡೆಸುವ ವಿಚಾರ ಹೈಕೋರ್ಟ್ ಮೊರೆ ಹೋಗಿತ್ತು. ಅಂತಿಮವಾಗಿ ಹೈಕೋರ್ಟ್ ನಿರ್ದೇಶನದಂತೆ ಶಾಂತಿ ಸಭೆಯನ್ನು ನಡೆಸಿ ಪಥಸಂಚಲನವನ್ನು ಮಾಡಲಾಗಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


