ಭಾರತದ ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ವಿದೇಶ ಪ್ರವಾಸಕ್ಕಾಗಿ ದೆಹಲಿಯಿಂದ ಸೋಮವಾರ ಹೊರಟಿದ್ದಾರೆ. ಜೋರ್ಡಾನ್, ಇಥಿಯೋಫಿಯಾ ಮತ್ತು ಓಮನ್ ರಾಷ್ಟ್ರಗಳಿಗೆ ನರೇಂದ್ರ ಮೋದಿ ಭೇಟಿ ನೀಡಲಿದ್ದು, ವಿವಿಧ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ತಮ್ಮ ಪ್ರವಾಸದ ಕುರಿತು ನರೇಂದ್ರ ಮೋದಿ ಪೋಸ್ಟ್ ಹಾಕಿದ್ದು, ‘ಇಂದು ನಾನು ಹ್ಯಾಶ್‌ಮೈಟ್ ಕಿಂಗ್‌ಡಮ್ ಆಫ್ ಜೋರ್ಡಾನ್, ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾ ಮತ್ತು ಸುಲ್ತಾನೇಟ್ ಆಫ್ ಓಮನ್ ಈ ಮೂರು ರಾಷ್ಟ್ರಗಳಿಗೆ ಭೇಟಿ ನೀಡಲು ಹೊರಟಿದ್ದೇನೆ’ ಎಂದು ಹೇಳಿದ್ದಾರೆ.
‘ಈ ಮೂರೂ ರಾಷ್ಟ್ರಗಳೊಂದಿಗೆ ಭಾರತವು ಯುಗಯುಗಗಳಿಂದ ನಾಗರಿಕತೆಯ ಸಂಬಂಧಗಳನ್ನು ಮತ್ತು ವ್ಯಾಪಕವಾದ ಸಮಕಾಲೀನ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿದೆ’ ಎಂದು ಮೋದಿ ಬಣ್ಣಿಸಿದ್ದಾರೆ.
ನರೇಂದ್ರ ಮೋದಿ ಮೊದಲು ಕಿಂಗ್ ಅಬ್ದುಲ್ಲಾ ಇಬ್ನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಜೋರ್ಡಾನ್‌ಗೆ ಭೇಟಿ ನೀಡುತ್ತಿದ್ದಾರೆ. ಈ ಐತಿಹಾಸಿಕ ಭೇಟಿಯು ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಗೆ 75 ವರ್ಷಗಳು ಪೂರ್ಣಗೊಂಡಿರುವುದಕ್ಕೆ ಸಾಕ್ಷಿಯಾಗಲಿದೆ.
ಈ ಪ್ರವಾಸದ ವೇಳೆ ನರೇಂದ್ರ ಮೋದಿ ಕಿಂಗ್ ಅಬ್ದುಲ್ಲಾ ಇಬ್ನ್ ಅಲ್ ಹುಸೇನ್, ಜೋರ್ಡಾನ್‌ನ ಪ್ರಧಾನ ಮಂತ್ರಿ ಜಾಫರ್ ಹಸನ್ ಅವರನ್ನು ಭೇಟಿಯಾಗಲಿದ್ದು, ಹಲವು ವಿಚಾರಗಳ ಕುರಿತು ಚರ್ಚೆಗಳನ್ನು ನಡೆಸಲಿದ್ದಾರೆ.
ಅಲ್ ಹುಸೇನ್ ಬಿನ್ ಅಬ್ದುಲ್ಲಾ ಅವರ ಜೊತೆ ಸಮಾಲೋಚನೆ ನಡೆಸಲು ಎದುರು ನೋಡುತ್ತಿದ್ದೇನೆ. ಭಾರತ-ಜೋರ್ಡಾನ್ ಸಂಬಂಧ ಮತ್ತು ಅಲ್ಲಿ ಭಾರತೀಯ ಸಮುದಾಯವನ್ನು ಸಹ ನಾನು ಭೇಟಿ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಇಥಿಯೋಫಿಯಾಕ್ಕೆ ಭೇಟಿ: ಜೋರ್ಡಾನ್‌ನಿಂದ ನರೇಂದ್ರ ಮೋದಿ ಇಥಿಯೋಪಿಯಾದ ಪ್ರಧಾನಿ ಡಾ. ಅಬಿಯ್ ಅಹ್ಮದ್ ಅಲಿ ಆಹ್ವಾನದ ಮೇರೆಗೆ ಫೆಡರಲ್ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಇಥಿಯೋಪಿಯಾಕ್ಕೆ ಭೇಟಿ ನೀಡುತ್ತಿದ್ದಾರೆ.
ಇದು ರಾಷ್ಟ್ರಕ್ಕೆ ನರೇಂದ್ರ ಮೋದಿ ಮೊದಲ ಭೇಟಿಯಾಗಿದೆ. ಆಡಿಸ್ ಅಬಾಬಾ ಆಫ್ರಿಕನ್ ಒಕ್ಕೂಟದ ಪ್ರಧಾನ ಕಚೇರಿಯೂ ಆಗಿರುವ ಇಥಿಯೋಫಿಯಾ 2023ರಲ್ಲಿ ಭಾರತದ G20 ಅಧ್ಯಕ್ಷತೆಯ ಸಮಯದಲ್ಲಿ ಆಫ್ರಿಕನ್ ಒಕ್ಕೂಟದ G20 ಖಾಯಂ ಸದಸ್ಯರಾಗಿ ಸೇರ್ಪಡೆಗೊಂಡಿತು.
ಆಡಿಸ್ ಅಬಾಬಾದಲ್ಲಿ ಮೋದಿ ಡಾ. ಅಬಿಯ್ ಅಹ್ಮದ್ ಅಲಿ ಅವರೊಂದಿಗೆ ಚರ್ಚೆಗಳನ್ನು ನಡೆಸಲಿದ್ದಾರೆ ಮತ್ತು ಅಲ್ಲಿ ನೆಲೆಸಿರುವ ಭಾರತೀಯ ವಲಸಿಗರನ್ನು ಭೇಟಿ ಮಾಡಲಿದ್ದಾರೆ. ಅಲ್ಲದೇ ಅಲ್ಲಿಯ ಸಂಸತ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದು, ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಪ್ರಧಾನಿ ಮೋದಿ ‘ಪ್ರಜಾಪ್ರಭುತ್ವದ ತಾಯಿಯಾಗಿ ಭಾರತದ ಪಯಣ’ ಎಂಬ ವಿಚಾರದ ಕುರಿತು ಮತ್ತು ಭಾರತ-ಇಥಿಯೋಪಿಯಾ ಪಾಲುದಾರಿಕೆಯು ವಿಶ್ವದ ದಕ್ಷಿಣಕ್ಕೆ ತರಬಹುದಾದ ಮೌಲ್ಯದ ಕುರಿತು ಮಾತನಾಡಲಿದ್ದಾರೆ.
ಓಮನ್ ಭೇಟಿ: ಪ್ರಧಾನಿ ಮೋದಿ ಓಮನ್‌ಗೆ ಭೇಟಿ ನೀಡುತ್ತಿದ್ದಾರೆ. ಭಾರತ ಮತ್ತು ಓಮನ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಗೆ 70 ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಮಸ್ಕತ್‌ನಲ್ಲಿ ಮೋದಿ ಓಮನ್ ಸುಲ್ತಾನರೊಂದಿಗೆ ಚರ್ಚೆ ನಡೆಸಲಿದ್ದಾರೆ. ಭಾರತದ ಆರ್ಥಿಕ ಹಾಗೂ ಬಲವಾದ ವಾಣಿಜ್ಯ ಮತ್ತು ಆರ್ಥಿಕ ಸಂಬಂಧಗಳ ಪಾಲುದಾರಿಕೆ ಕುರಿತು ಚರ್ಚಿಸಲಿದ್ದಾರೆ.
ತಮ್ಮ ಭೇಟಿಯ ವೇಳೆ ಓಮನ್‌ನಲ್ಲಿರುವ ಭಾರತೀಯ ವಲಸಿಗರ ಸಮೂಹವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ದೇಶದ ಅಭಿವೃದ್ಧಿ ಮತ್ತು ನಮ್ಮ ಪಾಲುದಾರಿಕೆಯನ್ನು ಹೆಚ್ಚಿಸುವಲ್ಲಿ ಭಾರತೀಯರಯ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


