ಕೇರಳ ಬಳಿಕ ಕರ್ನಾಟಕದಲ್ಲಿ ಭಾರತೀಯ ಅಂಚೆ Gen-Z ಅಂಚೆ ಕಚೇರಿಯನ್ನು ಬೆಂಗಳೂರು ನಗರದಲ್ಲಿ ಸ್ಥಾಪನೆ ಮಾಡಿದೆ. ದೇಶದ ಮೊಟ್ಟ ಮೊದಲ ಕೆಲವು ದಿನಗಳ ಹಿಂದೆ Gen-Z ಅಂಚೆ ಕಚೇರಿಯನ್ನು ಸ್ಥಾಪನೆ ಮಾಡಲಾಗಿತ್ತು. ತನ್ನ ವಿನ್ಯಾಸದಿಂದಲೇ ಈ ಕಚೇರಿ ಯುವಕರ ಗಮನ ಸೆಳೆಯುತ್ತಿದೆ.
ಬೆಂಗಳೂರಿನ ಅಚಿತ್ ನಗರದಲ್ಲಿ Gen-Z ಅಂಚೆ ಕಚೇರಿಯನ್ನು ಸ್ಥಾಪನೆ ಮಾಡಲಾಗಿದೆ. ತನ್ನ ಫೇಸ್‌ಬುಕ್ ಖಾತೆಯಲ್ಲಿ ಅಂಚೆ ಕಚೇರಿಯ ಚಿತ್ರಗಳನ್ನು ಅಂಚೆ ಇಲಾಖೆ ಪೋಸ್ಟ್ ಮಾಡಿದ್ದು, ಬಹುರಾಷ್ಟ್ರೀಯ ಕಂಪನಿಯ ಕಚೇರಿಯಂತೆ ಅಂಚೆ ಇಲಾಖೆ ಕಚೇರಿ ಕಾಣುತ್ತಿದೆ.
ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ಸಾಂಪ್ರದಾಯಿಕ ಅಂಚೆ ಕಚೇರಿ ಇತ್ತು. ಈ ಸ್ಥಳದಲ್ಲಿಯೇ ಅಜಿತ್ ನಗರದ Gen-Z ಅಂಚೆ ಕಚೇರಿಯನ್ನು ನವೀಕರಣ ಮಾಡಲಾಗಿದೆ. ಈ ಕಚೇರಿಯ ವಿನ್ಯಾಸವನ್ನು ಕಾಲೇಜಿನ ವಿದ್ಯಾರ್ಥಿಗಳೇ ರೂಪಿಸಿದ್ದಾರೆ.
Gen-Z ಅಂಚೆ ಕಚೇರಿ ವಿಶೇಷತೆ: ವರ್ಕ್ ಕೆಫೆ ಮಾದರಿ ವಿನ್ಯಾಸ, ಡಿಜಿಟಲ್ ಪಾವತಿ, ಮೈ ಸ್ಟ್ಯಾಂಪ್ ಮೂಲಕ ನಿಮ್ಮ ಭಾವಚಿತ್ರದ ಅಂಚೆ ಚೀಟಿ ಪಡೆಯುವ ಸೌಲಭ್ಯ, ಓದಲು ಪುಸ್ತಕಗಳು, ಕಾಫಿ ಮೆಷಿನ್ ಹೀಗೆ Gen-Z ಅಂಚೆ ಕಚೇರಿಯ ಹೊಸ ವಿನ್ಯಾಸ ಜನರ ಗಮನವನ್ನು ಸೆಳೆಯುತ್ತಿದೆ.
ಆಟಿಕೆಗಳಿಂದ ತುಂಬಿದ ಬುಕ್-ಬೂತ್ ಮತ್ತು ವಿದ್ಯಾರ್ಥಿಗಳು ರಚಿಸಿದ ಕಲಾಕೃತಿಗಳನ್ನು Gen-Z ಅಂಚೆ ಕಚೇರಿಯಲ್ಲಿ ಇಡಲಾಗಿದೆ. ಉಚಿತ ವೈ-ಫೈ ವ್ಯವಸ್ಥೆ, ಆದಾಮದಾಯಕ ಆಸನಗಳು, ಮೊಬೈಲ್/ ಲ್ಯಾಪ್‌ಟಾಪ್ ಚಾರ್ಜಿಂಗ್ ವ್ಯವಸ್ಥೆ ಈ ಅಂಚೆ ಕಚೇರಿಯಲ್ಲಿದೆ.

ಸ್ವಯಂ ಬುಕ್ಕಿಂಗ್ ಮಾಡಬಹುದಾದ ಕಿಯೋಸ್ಕ್ ಮತ್ತು ಕ್ಯು ಆರ್ ಕೋಡ್ ತ್ವರಿತ ಪಾವತಿ ವ್ಯವಸ್ಥೆ, ಡಿಜಿಟಲ್ ಪಾವತಿ ಇದೆ. ಮೈಸ್ಟ್ಯಾಂಪ್ ಕೌಂಟರ್ ಎಂಬಲ್ಲಿ ತಮ್ಮದೇ ಭಾವಚಿತ್ರ ಇರುವ ಅಂಚೆ ಚೀಟಿಯನ್ನು ಪಡೆಯಬಹುದು.
ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಪ್ರಕಾಶ್ ಕರ್ನಾಟಕದ ಮೊದಲ ಮತ್ತು ದೇಶದ 2ನೇ Gen-Z ಅಂಚೆ ಕಚೇರಿಯನ್ನು ಉದ್ಘಾಟನೆ ಮಾಡಿದರು. Gen-Z ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿ ಈ ಅಂಚೆ ಕಚೇರಿಯನ್ನು ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು.
ಭಾರತೀಯ ಅಂಚೆ ಇಲಾಖೆ Gen-Z ಅಂಚೆ ಕಚೇರಿಯನ್ನು ‘ವಿದ್ಯಾರ್ಥಿಗಳಿಂದ ವಿದ್ಯಾರ್ಥಿಗಳಿಗಾಗಿ’ ಎಂಬ ಘೋಷವಾಕ್ಯದಡಿ ಆರಂಭಿಸುತ್ತಿದೆ. ಮೊದಲ ಹಂತದಲ್ಲಿ ದೇಶದ ಪ್ರತಿಷ್ಠಿತ ಕಾಲೇಜುಗಳ ಆವರಣದಲ್ಲಿ ಈ ಮಾದರಿ ಅಂಚೆ ಕಚೇರಿಯನ್ನು ಸ್ಥಾಪನೆ ಮಾಡಲಾಗುತ್ತಿದೆ. ಕೇರಳ ರಾಜ್ಯದಲ್ಲಿ ಮೊದಲ ಅಂಚೆ ಕಚೇರಿಯ ಕೆಳದ ವಾರ ಆರಂಭವಾಗಿತ್ತು.
Gen-Z ಅಂಚೆ ಕಚೇರಿಯನ್ನು ಉದ್ಘಾಟಿಸುವ ಮೂಲಕ ಭಾರತೀಯ ಅಂಚೆ ಇಲಾಖೆಯು ತನ್ನ ಆಧುನೀಕರಣದ ಪಯಣದಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಅಂಚೆ ಇಲಾಖೆ ಹೇಳಿದೆ. ಇಂದಿನ ವಿದ್ಯಾರ್ಥಿಗಳು ಮತ್ತು ಯುವ ಜನರನ್ನು ಅಂಚೆ ಕಚೇರಿಯತ್ತ ಸೆಳೆಯಲು ಈ ಕ್ರಮ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಂಚೆ ಕಚೇರಿಯನ್ನು ಯುವ ಕೇಂದ್ರಿತ ಸ್ಥಳಗಳನ್ನಾಗಿ ಪರಿವರ್ತಿಸುವ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ದೂರದೃಷ್ಟಿಯಲ್ಲಿ ಈ Gen-Z ಅಂಚೆ ಕಚೇರಿಯನ್ನು ಸ್ಥಾಪನೆ ಮಾಡಲಾಗುತ್ತಿದೆ. ಆದ್ದರಿಂದ ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿಯೇ ಅಂಚೆ ಸೇವೆಗಳ ಸಂಪೂರ್ಣ ಹೊಸ ಸ್ವರೂಪದ ಕಚೇರಿಯನ್ನು ಸ್ಥಾಪನೆ ಮಾಡಲಾಗುತ್ತದೆ. ಕ್ಯೂಆರ್ ಕೋಡ್ ಆಧಾರಿತ ಪಾರ್ಸೆಲ್ ಬುಕಿಂಗ್ ಮತ್ತು ವಿದ್ಯಾರ್ಥಿ ಸ್ನೇಹಿ ಸ್ಪೀಡ್ ಪೋಸ್ಟ್ ರಿಯಾಯಿತಿಗಳು ಇದ್ದು ಇಲ್ಲಿನ ಎಲ್ಲಾ ಸೇವೆಗಳನ್ನು ಸ್ಮಾರ್ಟ್‌ಗೊಳಿಸಲಾಗಿದೆ.
Gen-Z ಅಂಚೆ ಕಚೇರಿಯನ್ನು ಎರಡು ವಿಭಾಗವಾಗಿ ಪರಿಚಯಿಸಲಾಗುತ್ತದೆ. ಮೊದಲನೆ ವಿಭಾಗದಲ್ಲಿ ವಿದ್ಯಾರ್ಥಿಗಳು ನಮ್ಮ ಸಿಬ್ಬಂದಿಯೊಂದಿಗೆ ಬಂದು ಕೆಲಸ ಮಾಡಬಹುದು ಮತ್ತು ಉತ್ತಮ ಅನುಭವವನ್ನು ಪಡೆಯಬಹುದು.
ಹಾಗೆಯೇ ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಲಭ್ಯವಿರುವ ಯೋಜನೆಗಳು ಮತ್ತು ಸೇವೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು. ಇನ್ನೊಂದು ವಿಭಾಗದಲ್ಲಿ ವಿದ್ಯಾರ್ಥಿಗಳು ಪಾರ್ಟ್‌ಟೈಂ ಕೆಲಸ ಮಾಡಿದರೆ ಸಹ ಅವರಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ, ಇದನ್ನು ಜಾರಿಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


