ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸೋನಿಯಾ ಗಾಂಧಿ ತ್ಯಾಗದಿಂದ ಕ್ರಿಸ್‌ಮಸ್ ಆಚರಣೆ ಎಂದು ಸಿಎಂ ರೇವಂತ್ ರೆಡ್ಡಿ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಸಿಎಂ ರೇವಂತ್ ರೆಡ್ಡಿ ಶನಿವಾರ ಹೈದರಾಬಾದ್‌ನ ಸ್ಟೇಡಿಯಂನಲ್ಲಿ ಸರ್ಕಾರ ಆಯೋಜಿಸಿದ್ದ ಕ್ರಿಸ್‌ಮಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು. ಆಗ ತೆಲಂಗಾಣದಲ್ಲಿ ಕ್ರಿಸ್‌ಮಸ್ ಆಚರಣೆಗೆ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ತ್ಯಾಗವೇ ಕಾರಣ ಎಂದು ಹೇಳಿದ್ದರು.
ಈ ಹೇಳಿಕೆ ಮೂಲಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿವಾದವನ್ನು ಹುಟ್ಟು ಹಾಕಿದ್ದಾರೆ. ಬಿಜೆಪಿ ಕಟುವಾದ ಶಬ್ದಗಳಿಂದ ಮುಖ್ಯಮಂತ್ರಿಗಳ ಹೇಳಿಕೆಯನ್ನು ಟೀಕಿಸಿದ್ದು, ರಾಜ್ಯದ ಮುಖ್ಯಸ್ಥರ ಈ ಹೇಳಿಕೆ ಬೇಜವಾಬ್ದಾರಿ ತನವನ್ನು ತೋರಿಸುತ್ತದೆ ಎಂದು ಹೇಳಿದೆ.
ರೇವಂತ್ ರೆಡ್ಡಿ ಹೇಳಿದ್ದೇನು?: ತಮ್ಮ ಭಾಷಣದಲ್ಲಿ ಸೋನಿಯಾ ಗಾಂಧಿ ಜನ್ಮದಿನ ಮತ್ತು ತೆಲಂಗಾಣ ರಾಜ್ಯ ರಚನೆಯಾದ ತಿಂಗಳು ಎರಡನ್ನೂ ಉಲ್ಲೇಖಿಸಿ ರೇವಂತ್ ರೆಡ್ಡಿ ಮಾತನಾಡಿದ್ದರು.
“ಇಂದು ತೆಲಂಗಾಣದಲ್ಲಿ ಜನರು ಕ್ರಿಸ್‌ಮಸ್ ಆಚರಿಸುತ್ತಿದ್ದರೆ, ಅದರ ಹಿಂದೆ ಸೋನಿಯಾ ಗಾಂಧಿಯವರ ಪ್ರಮುಖ ಪಾತ್ರ ಮತ್ತು ತ್ಯಾಗವಿದೆ. ಡಿಸೆಂಬರ್ ತಿಂಗಳು ತೆಲಂಗಾಣಕ್ಕೆ ವಿಶೇಷ ಮಹತ್ವದ್ದು” ಎಂದು ಹೇಳಿದ್ದರು.
ರೇವಂತ್ ರೆಡ್ಡಿ ಧಾರ್ಮಿಕ ಹಬ್ಬವನ್ನು ರಾಜಕೀಯಗೊಳಿಸುತ್ತಿದ್ದಾರೆ ಮತ್ತು ಈ ಹೋಲಿಕೆಗಳ ಮೂಲಕ ರಾಜ್ಯದ ಮುಖ್ಯಸ್ಥರಾಗಿ ಅವರು ಯಾವ ಸಂದೇಶವನ್ನು ನೀಡಲು ಹೊರಟಿದ್ದಾರೆ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್.ಪಿ. ಸಿಂಗ್ ಮಾತನಾಡಿ, “ಸೋನಿಯಾ ಗಾಂಧಿ ಅವರು ಎಂದಿಗೂ ಹಿಂದೂ ನಂಬಿಕೆಗಳಲ್ಲಿ ವಿಶ್ವಾಸ ತೋರಿಸಿಲ್ಲ. ಅವರು ಕ್ರೈಸ್ತ ಧರ್ಮವನ್ನೇ ಅನುಸರಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಜನಪಥ್‌ನಲ್ಲಿರುವ ಅವರ ನಿವಾಸದಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತಿತ್ತು, ಆದರೆ ದೀಪಾವಳಿ ಆಚರಿಸುತ್ತಿರಲಿಲ್ಲ ಎಂಬುದನ್ನು ಅನೇಕರು ಗಮನಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮ ನಂಬಿಕೆಗಳನ್ನು ಪಾಲಿಸುವುದು ಸರಿ, ಆದರೆ ರಾಜ್ಯದ ಮುಖ್ಯಸ್ಥರ ಇಂತಹ ಹೇಳಿಕೆ ಸರಿಯಲ್ಲ” ಎಂದು ಹೇಳಿದರು.
ಬಿಜೆಪಿ ನಾಯಕ ರಾಜ್ ಪುರೋಹಿತ್ ಮಾತನಾಡಿ ಸಿಎಂ ಹೇಳಿಕೆ ಬೇಜವಾಬ್ದಾರಿಯುತ ಎಂದರು, “ಏಸುಕ್ರಿಸ್ತರ ತ್ಯಾಗವನ್ನು ಸೋನಿಯಾ ಗಾಂಧಿಯವರಿಗೆ ಹೋಲಿಸುತ್ತಿದ್ದಾರೆಯೇ? ಉನ್ನತ ಸ್ಥಾನದಲ್ಲಿರುವ ಅವರು ಇಂತಹ ಹೇಳಿಕೆಗಳನ್ನು ನೀಡಬಾರದು” ಎಂದರು.
“ವಿವಾಹವಾಗಿ ಭಾರತಕ್ಕೆ ಬರುವುದು ತ್ಯಾಗವೇ?. ಮುಖ್ಯಮಂತ್ರಿಗಳು ಸಂಯಮ ಮತ್ತು ಜವಾಬ್ದಾರಿಯಿಂದ ಮಾತನಾಡಬೇಕು. ಸರ್ಕಾರಿ ಕಾರ್ಯಕ್ರಮದಲ್ಲಿ ನೀಡಿದ ತಮ್ಮ ಹೇಳಿಕೆಯನ್ನು ಅವರು ವಾಪಸ್ ಪಡೆಯಬೇಕು” ಎಂದು ಒತ್ತಾಯಿಸಿದರು.
ಬಿಜೆಪಿ ನಾಯಕ ವಿಕ್ರಮ್ ರಾಂಧವಾ ಮಾತನಾಡಿ, “ರಾಜಕೀಯ ಲಾಭಕ್ಕಾಗಿ ಸಿಎಂ ಕ್ರೈಸ್ತ ಧರ್ಮವನ್ನು ಅವಮಾನಿಸುತ್ತಿದ್ದಾರೆ. ರಾಜಕೀಯಕ್ಕಾಗಿ ಇಷ್ಟು ಕೆಳಮಟ್ಟಕ್ಕೆ ಇಳಿಯುವುದು ಖಂಡನೀಯ. ಅಂತರಾಷ್ಟ್ರೀಯ ಹಬ್ಬವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇಡೀ ಸಮುದಾಯದ ಭಾವನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ತಪ್ಪು” ಎಂದರು.
ಬಿಜೆಪಿ ತೆಲಂಗಾಣ ಘಟಕ ಸಹ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿಕೆ ಕುರಿತು ಪ್ರಕಟಣೆ ಬಿಡುಗಡೆ ಮಾಡಿದೆ. ಮುಂದೆ, ಗಾಂಧಿ ಕುಟುಂಬದ ಕಾರಣದಿಂದಲೇ ಸೂರ್ಯ ಉದಯಿಸುತ್ತಾನೆ ಎಂದು ಸಿಎಂ ಹೇಳಬಹುದು ಎಂದು ಲೇವಡಿ ಮಾಡಿದೆ.
ತೆಲಂಗಾಣ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿಗಳ ಹೇಳಿಕೆಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಮತ್ತು ಸಿಎಂ ರೇವಂತ್ ರೆಡ್ಡಿ ಅವರು ತಮ್ಮ ಹೇಳಿಕೆ ವಾಪಸ್ ಪಡೆದಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


